

ಮಸ್ಕಿ: ಭೂ ಪ್ರಕರಣಗಳನ್ನು ಮರು ವಿಚಾರಣೆ ಮಾಡಲು ಆಗ್ರಹಿಸಿ ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಹಾಗೂ ಸಿಪಿಐ(ಎಂಎಲ್), ರೆಡ್ ಸ್ಟಾರ್ ಮಸ್ಕಿ ತಾಲೂಕು ಘಟಕ ಸದಸ್ಯರು ಪಟ್ಟಣದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.
ಸಿಂಧನೂರು ತಾಲೂಕಿನ ಜವಳಗೇರಾ ಸೇರಿದಂತೆ ಜಿಲ್ಲೆಯ ಎಲ್ಲ ಹೆಚ್ಚುವರಿ ಭೂ ಪ್ರಕರಣಗಳ ಮರು ವಿಚಾರಣೆ ಮಾಡಬೇಕು. 1961-1974ರಲ್ಲಿ ಜಾರಿಗೆ ಬಂದ ಭೂ ಸುಧಾರಣೆ ಕಾಯ್ದೆಯನ್ನು ಭಾರಿ ಭೂ ಮಾಲೀಕರು ಹಾಗೂ ಅಧಿಕಾರಿಗಳು ಬುಡಮೇಲು ಮಾಡಲಾಗಿದೆ. ಬಡವರಿಗೆ ಹಂಚಬೇಕಾದ ಹೆಚ್ಚುವರಿ ಭೂಮಿಯನ್ನು ಕಳ್ಳ ದಾರಿಯಲ್ಲಿ ಭೂ ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಇದಕ್ಕೆ ಜವಳಗೇರಾ ನಾಡಗೌಡರ 4900 ಎಕರೆ ಭೂ ಹಗರಣ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ರಾಯಚೂರು ಜಿಲ್ಲೆಯ ಎಲ್ಲ ಭೂ ಮಾಲೀಕರು ಹೆಚ್ಚು ಭೂಮಿಯನ್ನು ಹೊಂದಿದ್ದಾರೆ. ಜವಳಗೇರಾ ನಾಡಗೌಡರ ಪ್ರಕರಣವು ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ ಹೆಚ್ಚುವರಿ ಭೂ ಪ್ರಕರಣಗಳನ್ನು ಕರ್ನಾಟಕ ಭೂ ಸುಧಾರಣೆ ಕಾಯ್ದೆ-1961 ಸೆಕ್ಷನ್ 122(ಎ) ಅಡಿ ಮರು ವಿಚಾರಣೆ ನಡೆಯಿಸಬೇಕು. ಸಿಂಧನೂರು ತಹಶೀಲ್ದಾರರು, ಲಿಂಗಸೂಗೂರು ಸಹಾಯಕ ಆಯುಕ್ತರು ಹಾಗೂ ರಾಯಚೂರು ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಭೂ ರಹಿತರ ಪರವಾಗಿ ಪಿಟಿಷನ್ ನೀಡಲಾಗಿದೆ. ಆದರೆ, ಅಧಿಕಾರಿಗಳು ಗಪ್‌ಚುಪ್ ಆಗಿದ್ದಾರೆ. ಇದರ ವಿರುದ್ಧ ಭೂ ರಹಿತ ಕೃಷಿ ಕಾರ್ಮಿಕರು ನಡೆಸಿರುವ ಅನಿರ್ದಿಷ್ಟ ಹಗಲು ರಾತ್ರಿ ಧರಣಿ 38ನೇ ದಿನಕ್ಕೆ ಕಾಲಿಟ್ಟಿರೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಕೇಳುತ್ತಿಲ್ಲ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು.
ಜವಳಗೇರಾ ಭೂ ಹೋರಾಟ ಸಮಿತಿಯ ಪ್ರಮುಖರಾದ ಸಂತೋಷ ಹಿರೇದಿನ್ನಿ, ಮಾರುತಿ ಜಿನ್ನಾಪೂರು, ವೆಂಕಟೇಶ ನಾಯಕ ಚಿಲ್ಕರಾಗಿ ಇನ್ನಿತರರಿದ್ದರು.