ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ, ಸರ್ಕಾರಿ ನೌಕರರ ಜವಾಬ್ದಾರಿ ಮಹತ್ತರವಾದುದು ಎಂದ ಸಚಿವ ಡಾ.ಎಂ.ಬಿ. ಪಾಟೀಲ

SARVOTTAMA AWARD FUNCTION
ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಉದ್ಘಾಟಿಸಿದರು. ಶಾಸಕ ವಿಠಲ ಕಟಕದೊಂಡ, ಡಿಸಿ ಟಿ.ಭೂಬಾಲನ್, ಸಿಇಒ ರಿಷಿ ಆನಂದ ಮತ್ತಿತರರಿದ್ದಾರೆ.
Published on

ವಿಜಯಪುರ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕರರ ಜವಾಬ್ದಾರಿ ಮಹತ್ತರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಇವರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತದೆ. ವಿವಿಧ ಯೋಜನೆಗಳನ್ನು ರೂಪಿಸುತ್ತದೆ. ಈ ಯೋಜನೆಗಳು ಸಮರ್ಪಕವಾಗಿ ಅನುಷ್ಟಾನಗೊಳಿಸಿ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯ ದೊರಕಿಸುವ ಅತ್ಯಂತ ಮಹತ್ತರವಾದ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿರುತ್ತದೆ. ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಒತ್ತಡಗಳ ಮಧ್ಯೆಯೇ ಲಭ್ಯವಿರುವ ಸಿಬ್ಬಂದಿ, ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಸರ್ಕಾರ ಜಾರಿಗೊಳಿಸಿರುವ ವಿವಿಧ ನಾಗರಿಕ ಸೌಲಭ್ಯಗಳನ್ನು ಜನರಿಗೆ ಒದಗಿಸುವ ಕಾರ್ಯದಿಂದಲೇ ಪ್ರಗತಿಪರ ರಾಜ್ಯ, ಜಿಲ್ಲೆಯಾಗಲು ಸಾಧ್ಯವಾಗುತ್ತದೆ. ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರ ಜೀವನಮಟ್ಟ ಸುಧಾರಿಸಲು ಅವಿರತವಾಗಿ ಶ್ರಮಿಸುತ್ತಿದೆ. ಹೀಗಾಗಿ ಸರ್ಕಾರಿ ನೌಕರರು ತಮ್ಮ ಜವಾಬ್ದಾರಿಯನ್ನಿರಿತು ಇರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕೆಂದರು.

ನೌಕರರ ಬೇಡಿಕೆ ಈಡೇರಿಸಲು ಬದ್ಧ

ಜಿಲ್ಲಾ ನೌಕರರ ಸಂಘದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಎನ್‌ಪಿಎಸ್ ದಿಂದ ಒಪಿಎಸ್ ಜಾರಿ ಮಾಡುವ ನೌಕರರ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸುತ್ತೇನೆ. ಸಾಧಕ-ಬಾಧಕಗಳ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಈ ಕುರಿತು ಪ್ರಾಮಾಣಿಕವಾಗಿ ಕ್ರಮ ವಹಿಸಲಾಗುವುದು. ಆರ್ಥಿಕವಾಗಿ ಅಪಾರ ಜ್ಞಾನ ಹೊಂದಿರುವ ಹಾಗೂ ಆರ್ಥಿಕ ಶಿಸ್ತು ಅಳವಡಿಸಿಕೊಂಡಿರುವ, ಬದ್ಧತೆ ಹೊಂದಿರುವ ಮುಖ್ಯಮಂತ್ರಿಗಳು ಈ ಕುರಿತು ಅಗತ್ಯ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ನೂರಕ್ಕೆ ನೂರರಷ್ಟು ನಿವೇಶನ ಒದಗಿಸುವುದಾಗಿ ಹೇಳಿದರು.

10 ಜನ ಪ್ರಶಸ್ತಿಗೆ ಆಯ್ಕೆ

ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ಪ್ರತಿ ವರ್ಷ ಏಪ್ರಿಲ್ 21 ರಂದು ಸರ್ಕಾರಿ ನೌಕರರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಸರ್ಕಾರಿ ಅಧಿಕಾರಿ-ನೌಕರರ ಗುರುತಿಸಿ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಪ್ರೋತ್ಸಾಹಿಸಲಾಗುತ್ತದೆ. ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ 30 ಜನರನ್ನು ಆಯ್ಕೆ ಮಾಡಲಾಗಿದೆ. 2023, 2024 ಹಾಗೂ 2025ನೇ ಸಾಲಿನಲ್ಲಿ ತಲಾ 10 ಜನರನ್ನು ಆಯ್ಕೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಅಧಿಕಾರಿ-ನೌಕರರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರಿಂದಲೇ ನನ್ನನ್ನು ಸೇರಿದಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ರಾಜ್ಯ ಮಟ್ಟದಲ್ಲಿ ನಮ್ಮ ಸೇವೆ ಗುರುತಿಸುವಂತಾಗಿದೆ. ಹೊರ ರಾಜ್ಯದಿಂದ ಬಂದು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನನಗೆ ಇಲ್ಲಿನ ಅಧಿಕಾರಿ-ನೌಕರರು ನೀಡುವ ಸಹಾಯ- ಸಹಕಾರದಿಂದಲೇ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದೆ ಎಂದರು.

ನಾಗಠಾಣ ಶಾಸಕ ವಿಠಲ ಕಟಕದೋಂಡ, ಧಾರವಾಡದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ ಮುಶ್ರೀಫ್, ಜಿಪಂ ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ ಮತ್ತಿತರರಿದ್ದರು. ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ ಸ್ವಾಗತಿಸಿದರು. ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net