

ಬೆಂಗಳೂರು:ತೊಗರಿ ಬೆಳಗಾರರಿಗೆ ಪರಿಹಾರ ಒದಗಿಸುವ ಕುರಿತು ಬಗ್ಗೆ ವಿಶೇಷ ಪ್ಯಾಕೇಜ್ ನೀಡಲು ತೊಗರಿ ಬೆಳೆಯುವ ಪ್ರದೇಶದ ಶಾಸಕರನ್ನು ಕರೆದು ಸಿಎಂ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಭರವಸೆ ನೀಡಿದರು.
ಬುಧವಾರ ವಿಧಾನಪರಿಷತ್ತಿನ ಕಲಾಪದಲ್ಲಿ ನಿಯಮ 330 ರಡಿ ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಪ ಮುಖ್ಯಸಚೇತಕ ಎನ್. ರವಿಕುಮಾರ, ಬಿಜೆಪಿಯ ಶಶೀಲ್ ಜಿ. ನಮೋಶಿ, ಡಾ. ಸಾಬಣ್ಣ ತಳವಾರ, ಹೇಮಲತಾ ನಾಯಕ್, ಪಿ.ಎಚ್. ಪೂಜಾರ, ಕಾಂಗ್ರೆಸ್ನ ತಿಪ್ಪಣ್ಣಪ್ಪ ಕಮಕನೂರ ಪ್ರಸ್ತಾಪಿಸಿದ ವಿಷಯಕ್ಕೆ ಸಚಿವರು ಉತ್ತರಿಸಿದರು.
ಒಂದೊಂದು ಪ್ರದೇಶದಲ್ಲಿ ಒಂದೊಂದು ಕೃಷಿ ಉತ್ಪನ್ನಗಳು ಬೆಳೆಯಲಾಗುತ್ತದೆ. ಸದ್ಯ ತಾಂತ್ರಿಕ ಕಾರಣಗಳಿಂದ ತೊಗರಿಗೆ ಪ್ಯಾಕೇಜ್ ಘೋಷಣೆ ಮಾಡಲು ಸಾಧ್ಯವಾಗಲ್ಲ. ಆದರೂ, ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಈ ಬಾರಿ ಬಜೆಟ್ನಲ್ಲಿ ತೊಗರಿ ಪೋತ್ಸಾಹಿಸಲು 80 ಕೋಟಿ ರೂ.ಹಣ ಒದಗಿಸಲಾಗಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ತೊಗರಿ ನೆಟೆರೋಗಕ್ಕೆ ರೂ. 213 ಕೋಟಿ ಬರ ಪರಿಹಾರ ಘೋಷಣೆ ಮಾಡಿತು. ಆದರೆ,ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಕಾರಣಕ್ಕಾಗಿ ಪರಿಹಾರ ನೀಡಿರಲಿಲ್ಲ. ನಂತರ, ನಮ್ಮ ಸರ್ಕಾರ ಬಂದ ಮೇಲೆ 2 ಕಂತಿನಲ್ಲಿ ಪರಿಹಾರ ಬಿಡುಗಡೆಗೊಳಿಸಲಾಗಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರ ಜತೆಗೂಡಿ ಶೇ.98 ರಷ್ಟು ಬೆಳೆ ಪರಿಹಾರ ಮೊತ್ತ ಪಾವತಿಸುತ್ತದೆ. ರೈತರು ಕೇವಲ ಶೇ.2 ಪ್ರೀಮಿಯಂ ಹಣ ಪಾವತಿಸುತ್ತಾರೆ. ಈ ನಿಟ್ಟಿನಲ್ಲಿ ಬೆಳೆ ವಿಮೆ ಜಾಗೃತಿ ಮೂಡಿಸಲು ಕ್ರಮವಹಿಸಲಾಗುವುದು ಎಂದರು.