ಹುದ್ದೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದ ಬಿ.ಸಿ.ಪಾಟೀಲ್

Raghu_06_New_Ministers_Swearing_Ceremony_@_Rajbhavan (50)
Published on

ಹಿರೇಕೆರೂರ: ಕ್ಷೇತ್ರದ ಜನತೆಯ ಆಶೀರ್ವಾದದಿಂದ ಸಚಿವ ಸ್ಥಾನ ದೊರಕಿದ್ದು, ಬಹುದಿನದ ಬೇಡಿಕೆ ಈಡೇರಿದೆ. ಯಾವುದೇ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಸಚಿವ ಬಿ.ಸಿ. ಪಾಟೀಲ ಹೇಳಿದರು.

ಬೆಂಗಳೂರಿನ ರಾಜಭವನದಲ್ಲಿ ಗುರುವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಲ್ಲಿನ ಶಿವಾಜಿನಗರದ ಎಕೆಪಿ ಕನ್ವೆನ್ಷನ್ ಹಾಲ್​ನಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಅಭಿನಂದನಾ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

17 ಜನ ಶಾಸಕರು ರಾಜೀನಾಮೆ ನೀಡಿದ್ದರಿಂದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿದ್ದು, ಉಳಿದವರಿಗೆ ಸಚಿವ ಸ್ಥಾನ ದೊರಕದೆ ಇರುವುದು ನೋವುಂಟು ಮಾಡಿದೆ. ಮಾತಿಗೆ ತಪ್ಪದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ನಮಗೆ ಭರವಸೆ ಇದ್ದು, ಮುಂಬರುವ ದಿನಗಳಲ್ಲಿ ಉಳಿದವರಿಗೆ ಸಚಿವ ಸ್ಥಾನ ದೊರಕುವ ವಿಶ್ವಾಸವಿದೆ. ಸದ್ಯದಲ್ಲೇ ಹಿರೇಕೆರೂರಿನಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿ ತಾಲೂಕಿನ ಎಲ್ಲ ಮತದಾರಿಗೆ ಕೃತಜ್ಞತೆ ತಿಳಿಸಲಾಗುವುದು ಎಂದರು.

ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಈ ಹಿಂದೆ ಇದ್ದ ಸರ್ಕಾರ ಪತನವಾಗುವಲ್ಲಿ ಸಚಿವರಾದ ಬಿ.ಸಿ.ಪಾಟೀಲ ಸೇರಿ 17 ಶಾಸಕರು ಪಾತ್ರ ಬಹುದೊಡ್ಡದಾಗಿದೆ. ಬಹಳ ವರ್ಷಗಳ ನಂತರ ಈ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರಕಿದ್ದು, ಪಾಟೀಲರು ಈ ಹುದ್ದೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವರು ಎಂದರು.

ಜಿಪಂ ಸದಸ್ಯರಾದ ಎನ್.ಎಂ. ಈಟೇರ, ಶಿವರಾಜ ಹರಿಜನ ಮಾತನಾಡಿದರು. ಬೆಂಗಳೂರಿನ ಎಸ್.ಗಣೇಶ, ವಿ.ಪುಷ್ಪರಾಜ, ಪ್ರಥಮ ದರ್ಜೆ ಗುತ್ತಿಗೆದಾರ ಪ್ರಕಾಶಗೌಡ ಗೌಡರ ಮತ್ತು ಅಭಿಮಾನಿ ಬಳಗದಿಂದ ಹಾಗೂ ಪಕ್ಷದ ವಿವಿಧ ಮುಖಂಡರಿಂದ ಸಚಿವ ಬಿ.ಸಿ. ಪಾಟೀಲ, ವನಜಾ ಪಾಟೀಲ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಅವರನ್ನು ಸನ್ಮಾನಿಸಲಾಯಿತು.

ತಾಪಂ ಸದಸ್ಯ ಮಹೇಶ ಗುಬ್ಬಿ, ಜೆ.ಬಿ. ತಂಬಾಕದ, ಎಲ್.ಎಸ್. ಚಪ್ಪರದಹಳ್ಳಿ, ಸೃಷ್ಟಿ ಪಾಟೀಲ, ಪೀರಹ್ಮದ್ ಬೇವಿನಹಳ್ಳಿ, ಅಲ್ತಾಫಖಾನ್ ಪಠಾಣ, ಅಬ್ದುಲಖಾದರ್ ಲೋಹಾರ, ಸುಜಯ್ ಬೇಲೂರು ಹಾಗೂ ಅಭಿಮಾನಿಗಳು, ಪಕ್ಷದ ಮುಖಂಡರು ಇದ್ದರು. ಡಿ.ಸಿ. ಪಾಟೀಲ, ಆರ್.ಎನ್. ಗಂಗೋಳ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net