ರಾಮನಗರಕ್ಕೆ ಮಿನಿ ಬಸ್ ಸೇವೆ!

ksrtc
Published on

ಶೀಘ್ರದಲ್ಲೇ ಸಂಚಾರ ಆರಂಭ ಸಿದ್ಧತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ

ಗಂಗಾಧರ್ ಬೈರಾಪಟ್ಟಣ, ರಾಮನಗರ

ಬಿಎಂಟಿಸಿ ಮಾದರಿಯಲ್ಲಿಯೇ ರಾಮನಗರದ ನಗರ ಪ್ರದೇಶದ ಜನರಿಗೆ ಸಾರಿಗೆ ಸೌಲಭ್ಯ ಒದಗಿಸಲು ರಾಜ್ಯ ರಸ್ತೆ ಸಾರಿಗೆ ನಿಗಮ ಸಿದ್ಧತೆ ನಡೆಸಿದ್ದು,ಶೀಘ್ರದಲ್ಲಿಯೇ ಬಸ್‌ಗಳು ರಸ್ತೆಗೆ ಇಳಿಯಲಿವೆ.

ಬೆಂಗಳೂರಿನ ಮೆಜೆಸ್ಟಿಕ್, ಮಾರುಕಟ್ಟೆ ಸೇರಿ ವಿವಿಧ ಪ್ರಮುಖ ಸ್ಥಳಗಳನ್ನು ತಲುಪಿಸಲು ಕಡಿಮೆ ದರದಲ್ಲಿ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಮುಖ ಪಾತ್ರವಹಿಸಿದೆ. ಇದೇ ರೀತಿಯಲ್ಲಿ ರಾಮನಗರದ ಪ್ರಮುಖ ಪ್ರದೇಶ ಸಂಪರ್ಕಿಸುವ ನಿಟ್ಟಿನಲ್ಲಿ ರಾಮನಗರದಲ್ಲಿ ಬಸ್‌ಗಳ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಹೇಗಿರಲಿದೆ ಸಂಪರ್ಕ?

ಲಭ್ಯ ಮಾಹಿತಿ ಪ್ರಕಾರ ಸದ್ಯಕ್ಕೆ ರಾಮನಗರದ ಕೆಂಪೇಗೌಡ ವೃತ್ತ, ಚನ್ನೇನಹಳ್ಳಿ, ರಾಯರದೊಡ್ಡಿ, ಕೆಂಪೇಗೌಡನಹಳ್ಳಿ, ವಿಜಯನಗರ, ಯಾರಬ್ ನಗರ, ಜಿಲ್ಲಾಧಿಕಾರಿ ಕಚೇರಿ, ಕಾನೂನು ಕಾಲೇಜು, ಎಸ್‌ಪಿ ಕಚೇರಿ, ನಗರಸಭೆ, ರೈಲು ನಿಲ್ದಾಣ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹೀಗೆ ಹಲವಾರು ಕಡೆಗಳಿಗೆ ಒಂದೆಡೆಯಿಂದ ಮತ್ತೊಂದೆಡೆ ಸಾಗಬೇಕೆಂದರೆ ಆಟೋ ಇಲ್ಲವೆ ಖಾಸಗಿ ವಾಹನಗಳ ಬಳಕೆ ಮಾಡುವುದು ಅನಿವಾರ್ಯ. ಪ್ರತಿ ದಿನ ಕಾಲೇಜುಗಳಿಗೆ ಹೋಗಲು, ಕಾರ್ಖಾನೆಗಳಿಗೆ ಹೋಗಲು ಸರ್ಕಾರಿ ಬಸ್‌ಗಳ ಸೇವೆ ಲಭ್ಯವಿದೆಯಾದರೂ ಇದು ಸೀಮಿತವಾಗಿರುವ ಕಾರಣ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ತುದಿಯಿಂದ ಮತ್ತೊಂದು ತುದಿಗೆ ಈ ಬಸ್‌ಗಳು ಸಂಪರ್ಕ ಕಲ್ಪಿಸಲಿವೆ.

ಇದರಿಂದ ಏನು ಲಾಭ?

ರಾಮನಗರ ಅತಿ ದೊಡ್ಡ ನಗರವಲ್ಲದಿದ್ದರೂ ಜಿಲ್ಲಾ ಕೇಂದ್ರವಾಗಿರುವ ಕಾರಣ ಇದರ ವ್ಯಾಪ್ತಿ ವಿಸ್ತಾರಗೊಳ್ಳುತ್ತಲೇ ಇದೆ. ಅಲ್ಲದೆ, ನಗರಸಭೆ ಸಹ ವ್ಯಾಪ್ತಿ ವಿಸ್ತರಿಸಲು ಸಿದ್ಧತೆ ಮಾಡಿಕೊಂಡಿರುವ ಕಾರಣಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚಾರ ಮಾಡಲು ಖಾಸಗಿ ವಾಹನಗಳು ಇಲ್ಲವೇ, ಆಟೋಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಬಸ್ ನಿಲ್ದಾಣಕ್ಕೆ ಬರಬೇಕೆಂದರೂ ಕನಿಷ್ಠ ಎಂದರೂ 3-4 ಕಿಮೀ ಕ್ರಮಿಸಲೇಬೇಕಿದೆ. ಇದರಿಂದ ಪ್ರಮುಖವಾಗಿ ಬಡ ಜನರಿಗೆ ಅನುಕೂಲವಾಗುವ ಜತೆಗೆ, ಕಾಲೇಜು ವಿದ್ಯಾರ್ಥಿಗಳು, ಗಾರ್ಮೆಂಟ್ ಸೇರಿ ಇತರ ಖಾಸಗಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಇದರ ಲಾಭ ಹೆಚ್ಚಲಿದೆ.

ಸಿದ್ಧತೆಯಲ್ಲಿ ನಿಗಮ

ಕೆಎಸ್‌ಆರ್‌ಟಿಸಿ ರಾಮನಗರದಲ್ಲಿ ಬಸ್ ಸೇವೆ ಒದಗಿಸಲು ಸಿದ್ಧತೆಯಲ್ಲಿ ತೊಡಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಸ್ ಸಂಚರಿಸುವ ಮಾರ್ಗ, ನಿಲುಗಡೆ ಹಾಗೂ ಪ್ರಯಾಣ ದರ ನಿಗದಿ ಸಂಬಂಧ ಅಂತಿಮ ರೂಪ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಕೆಲವೇ ದಿನಗಳಲ್ಲಿ ಬಸ್‌ಗಳು ರಾಮನಗರ ನಗರ ಪ್ರದೇಶದಲ್ಲಿ ಸಂಚರಿಸಲಿವೆ.

ಮಿನಿ ಬಸ್

ರಾಮನಗರ ನಗರ ಪ್ರದೇಶದ ರಸ್ತೆಗಳು ಬಹುತೇಕ ಕಿರಿದಾಗಿರುವ ಕಾರಣ ಮಿನಿ ಬಸ್‌ಗಳು ಮಾತ್ರ ಸಂಚಾರ ಮಾಡಲಿವೆ. ಸದ್ಯಕ್ಕೆ 3-4 ಬಸ್‌ಗಳು ಮಾತ್ರ ಸಂಚಾರ ಮಾಡಲಿದ್ದು, ಬೇಡಿಕೆಗೆ ಅನುಗುಣವಾಗಿ ನಂತರದ ದಿನಗಳಲ್ಲಿ ಬಸ್‌ಗಳ ಸಂಚಾರ ಸಂಖ್ಯೆ ಹೆಚ್ಚಳ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸವಾಲಿನ ಕೆಲಸ

ರಾಮನಗರ ನಗರದ ಪ್ರದೇಶದಲ್ಲಿ ಸದ್ಯಕ್ಕೆ ಬಸ್‌ಗಳ ಸೇವೆ ಆರಂಭಿಸುವುದು ಸವಾಲಿನ ಕೆಲಸ. ಬಹುತೇಕ ರಸ್ತೆಗಳು ಕಿರಿದಾಗಿರುವ ಜತೆಗೆ ರಸ್ತೆಗಳು ಗುಂಡಿಮಯವಾಗಿರುವ ಕಾರಣ ಬಸ್‌ಗಳ ಸಂಚಾರದಿಂದ ಇತರ ವಾಹನಗಳ ಸವಾರರಿಗೆ ತೊಡಕಾಗಿ ಪರಿಣಮಿಸಬಹುದು. ಇಷ್ಟೇ ಅಲ್ಲದೆ, ನಗರ ಪ್ರದೇಶದಲ್ಲಿ ಸಂಚಾರ ದಟ್ಟಣೆಯೂ ಹೆಚ್ಚಾಗುವ ಸಾಧ್ಯತೆ ಇದ್ದು, ಇದರ ನಿರ್ವಹಣೆ ಸಂಬಂಧ ಅಧಿಕಾರಿಗಳು ನಿಗಾವಹಿಸಬೇಕಿದೆ.

ಆಟೋಗಳಿಗೆ ಹೊಡೆತ!

ನಗರದಲ್ಲಿ ಸಾರಿಗೆ ಸೇವೆ ಆರಂಭಿಸುವ ನಿರ್ಧಾರ ಸಾರ್ವಜನಿಕರಿಗೆ ಲಾಭದಾಯಕವಾಗಿ ಪರಿಣಮಿಸಿದ್ದರೂ, ಆಟೋ ಚಾಲಕರಿಗೆ ದುಬಾರಿಯಾಗಿ ಪರಿಣಮಿಸಲಿದೆ. ದೂರದ ಊರುಗಳಿಂದ ಬರುವ ಪ್ರಯಾಣಿಕರು ನಗರ ಪ್ರದೇಶದಲ್ಲಿ ಓಡಾಟ ನಡೆಸಲು ಆಟೋಗಳನ್ನು ಅವಲಂಬಿಸಿದ್ದಾರೆ. ಇದರಿಂದ ಚಾಲಕರ ಜೀವನವೂ ಸಾಗುತ್ತಿತ್ತು. ಆದರೆ, ಸಾರಿಗೆ ಸೇವೆ ಆರಂಭಗೊಂಡ ನಂತರ ಇವರ ಆದಾಯಕ್ಕೆ ಕೊಕ್ಕೆ ಬೀಳುವ ಸಾಧ್ಯತೆಗಳು ಹೆಚ್ಚಿವೆ.

===ನಗರ ಪ್ರದೇಶದಲ್ಲಿ ಸಾರಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬಸ್‌ಗಳ ಸಂಚಾರಕ್ಕೆ ಸಾರಿಗೆ ನಿಗಮಕ್ಕೆ ಮನವಿ ಮಾಡಲಾಗಿತ್ತು. ಇದರ ಭಾಗವಾಗಿ ಬಸ್‌ಗಳು ನಗರದ ಪ್ರದೇಶವಾದ ರಾಮನಗರದಲ್ಲಿ ಸಂಚಾರ ಮಾಡಲಿವೆ. ಎಚ್.ಎ.ಇಕ್ಬಾಲ್ ಹುಸೇನ್, ಶಾಸಕ, ರಾಮನಗರ

====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net