

ತುಮಕೂರು: ಗಣಿಭಾದಿತ ಪ್ರದೇಶಗಳ ಅಭಿವೃದ್ಧಿಗೆಂದು ಮೀಸಲಿಟ್ಟಿರುವ ಹಣ ಬಾಧಿತ ಪ್ರದೇಶಗಳ ಶಿಕ್ಷಣ, ಆರೋಗ್ಯ ಮತ್ತು ಅರ್ಥಿಕ ಅಭಿವೃದ್ಧಿಗೆ ಬಳಸುವಂತೆ ನಿಗಾವಹಿಸುವುದು. ಹೊಸ ಗಣಿಗಾರಿಕೆಗೆ ಅನುಮತಿ ನೀಡದಂತೆ ಒತ್ತಡ ತರುವುದು ಹಾಗೂ ಸೆಸ್ ಹಣ ಅನ್ಯ ಉದ್ದೇಶಗಳಿಗೆ ಬಳಕೆಯಾಗುವುದನ್ನು ತಡೆಯುವ ಉದ್ದೇಶದಿಂದ ಬಾಧಿತ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲು ಆ.16 ರಂದು ಬಳ್ಳಾರಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜನಾಂದೋಲನ ಮಹಾಮೈತ್ರಿಯ ಎಸ್.ಆರ್.ಹಿರೇಮಠ್ ಹೇಳಿದರು.
ನಗರದ ವಿಜ್ಞಾನ ಕೇಂದ್ರದಲ್ಲಿ ಜನಾಂದೋಲನ ಮಹಾಮೈತ್ರಿ ವತಿಯಿಂದ ಶುಕ್ರವಾರ ಗಣಿ ಭಾದಿತ ಪ್ರದೇಶಗಳ ಪುನಶ್ಚೇತನ ಸಮಾಲೋಚನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಬಳ್ಳಾರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಎಗ್ಗಿಲ್ಲದ ಗಣಿಗಾರಿಕೆಯಿಂದ ತೊಂದರೆಗೆ ಒಳಗಾದ ಜನರು ಹೋರಾಟದ ಫಲವಾಗಿ ತಪ್ಪಿತಸ್ಥರಿಗೆ ಶಿೆಯಾಯಿತು, ರೈತರು, ಕಾರ್ಮಿಕರು, ಪರಿಸರವಾದಿಗಳು, ಹೋರಾಟಗಾರರ ಐಕ್ಯ ಹೋರಾಟದಿಂದ ಇದು ಸಾಧ್ಯವಾಗಿದೆ, ಹಾಗಾಗಿ ಈ ಹೋರಾಟವನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಆ.16ರ ಸಮಾವೇಶದಲ್ಲಿ ಹೆಚ್ಚು ಯುವಜನರು ಪಾಲ್ಗೊಳ್ಳುವಂತಾಗಬೇಕು ಎಂದರು.
ಗಣಿ ಬಾಧಿತ ಪ್ರದೇಶಗಳ ಅಭಿವೃದ್ದಿ ನಿಗಮ 30 ಸಾವಿರ ಕೋಟಿ ಹಣವಿದೆ. ಇದನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಕೇಂದ್ರದ ಕೈಗಾರಿಕಾ ಮಂತ್ರಿಗಳು ಸೇರಿದಂತೆ ಹಲವು ತುದಿಗಾಲಲ್ಲಿ ಕಾಯುತಿದ್ದಾರೆ. ಆದರೆ, ಇದಕ್ಕೆ ಸುಪ್ರಿಂಕೋರ್ಟ್ ಅವಕಾಶ ಮಾಡಿಕೊಟ್ಟಿಲ್ಲ. ಬಾಧಿತ ಪ್ರದೇಶಗಳ ಜನರ ಶೈಕ್ಷಣಿಕ, ಆರೋಗ್ಯ ಮತ್ತು ಅದಾಯ ವೃದ್ದಿಗೆ ಈ ಹಣ ಸದುಪಯೋಗವಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ತಿಳಿಸಿದರು.
ಸಮಾಲೋಚನಾ ಸಭೆಗಳ ಮೂಲಕ ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು,ಹೋರಾಟಗಾರರಿಂದ ಮಾಹಿತಿ ಸಂಗ್ರಹಿಸಿ,ನಿಗಮದ ಅಧ್ಯಕ್ಷರಿಗೆ ಸಲ್ಲಿಸಲಾಗುವುದು. ಅಕ್ರಮ ಮತ್ತು ಸಕ್ರಮ ಎರಡು ಗಣಿಗಾರಿಕೆಯಿಂದ ಇಡೀ ಪರಿಸರ ಹಾಳಾಗಿದೆ. ಹಾಗಾಗಿ, ಹೊಸ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂಬುದು ನಮ್ಮ ಆಗ್ರಹವಾಗಿದೆ. ನಮ್ಮ ಒತ್ತಾಯದ ಮೇರೆಗೆ ತೀರ ಅಗತ್ಯವೆನಿಸಿದಾಗ ಒಂದು ಪ್ರದೇಶದಲ್ಲಿ 20 ಮಿಲಿಯನ್ ಮೆಟ್ರಿಕ್ ಟನ್ ಅದಿರು ತೆಗೆಯಲು ಮಾತ್ರ ಸುಪ್ರಿಂಕೋರ್ಟ್ ಅವಕಾಶ ಕಲ್ಪಿಸಿದೆ. ಇದರಲ್ಲಿ ಯಾವುದೇ ಆಕ್ರಮವಾಗದಂತೆ ಹೋರಾಟಗಾರರು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಪರಿಸರವಿದ್ದರೆ ನಾವು,ಗಣಿಯಿಂದಾಗಿ ಪರಿಸರದ ಮೇಲಾದ ದುಷ್ಪರಿಣಾಮದಿಂದ ಹವಾಮಾನ ವೈಪರಿತ್ಯ ಉಂಟಾಗಿ ಜನರು ವಿವಿಧ ರೀತಿಯ ತೊಂದರೆ ಅನುಭವಿಸುತಿದ್ದಾರೆ.ಇದರ ಜೊತೆಗೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ತೆಡೆಯುವ ನಿಟ್ಟಿನಲ್ಲಿ ಆಗಸ್ಟ್ 16 ರಂದು ಬಳ್ಳಾರಿಯಲ್ಲಿ ನಡೆಯುವ ಸಮಾವೇಶದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ಕರೆ ನೀಡಿದರು.
ಜನಾಂದೋಲನ ಮಹಾಮೈತ್ರಿಯ ಜಿಲ್ಲಾಧ್ಯಕ್ಷ ಪಂಡಿತ್ ಜವಹರ್, ಪರಿಸರವಾದಿ ಸಿ.ಯತಿರಾಜು, ಮಹಾ ಮೈತ್ರಿಯ ಕೆ.ವಿ.ಭಟ್, ಕೃಷಿ ವಿಜ್ಞಾನಿ ಡಾ.ಮಂಜುನಾಥ್, ರೈತರಾದ ರವೀಶ್, ಚಿಕ್ಕಬೋರೇಗೌಡ ಇದ್ದರು.