

ಮುದಗಲ್: ಗಣಿಗಾರಿಕೆ ಪ್ರದೇಶದಲ್ಲಿ ನಿಯಮಗಳನ್ನ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲಿಂಗಸುಗೂರು ಉಪವಿಭಾಗದ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕೃಷ್ಣಮೃಗ ಅಭಯಾರಣ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ಗಣಿ ಮಾಲೀಕರ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಸಮೀಪದ ಮಾಕಾಪೂರ ಗ್ರಾಮದಲ್ಲಿ ಕಲ್ಲು ದಿಮ್ಮೆ ತೆಗೆಯಲು ಸ್ಫೋಟ ಮಾಡಿದಾಗ ಒಬ್ಬ ಕಾರ್ಮಿಕ ಬಲಿಯಾಗಿದ್ದು, ಇನ್ನೊಬ್ಬ ಕಾರ್ಮಿಕ ತೀವ್ರವಾಗಿ ಗಾಯಗೊಂಡಿದ್ದಾನೆ.
ಮುನ್ನೆಚ್ಚರಿಕೆಗಾಗಿ ಮುದಗಲ್, ಆದಾಪೂರ, ಮಾಕಾಪೂರ ಗ್ರಾಮಗಳಲ್ಲಿ ಗಣಿ ಮಾಲೀಕರ ಸಭೆ ಕೈಗೊಂಡು ಸುರಕ್ಷತಾ ಕ್ರಮ ಬಗ್ಗೆ ಮಾಹಿತಿ ನೀಡಬೇಕಿತ್ತು. ಆದರೆ, ಸಭೆಗೆ ಯಾವೊಬ್ಬ ಗಣಿ ಮಾಲೀಕರು ಆಗಮಿಸದೇ ಗೈರಾಗಿರುವುದು ಸರಿಯಲ್ಲ ಎಂದರು.
ಪ್ರತಿಯೊಂದು ಗಣಿ ಪ್ರದೇಶದಲ್ಲಿ ಮುಖ್ಯವಾದ ಮಾರ್ಗ, ಸ್ಥಳದಲ್ಲಿ ಸುಮಾರು 5 ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಅಲ್ಲಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಸಾರ್ವಜನಿಕವಾಗಿ ಅಗತ್ಯಕ್ಕೆ ತಕ್ಕಂತೆ ನೀಡಲು ಅನೂಕೂಲವಾಗುತ್ತದೆ. ಯಾವುದೇ ಪ್ರಕರಣಗಳು ಸಂಭವಿಸಿದರೂ ಭೇಧಿಸಲು ಪೊಲೀಸರಿಗೆ ನೆರವಾಗುತ್ತದೆ.
ಇಲ್ಲವಾದಲ್ಲಿ ಅನುಮಾನಾಸ್ಪದವಾಗಿ ಪ್ರಕರಣ ದಾಖಲಾಗುತ್ತವೆ. ಪೊಲೀಸ್ ಇಲಾಖೆ ಗಣಿ ಪ್ರದೇಶಕ್ಕೆ ಭೇಟಿ ನೀಡಿದಾಗ ಸಿಸಿ ಕ್ಯಾಮರಾ ಇಲ್ಲದಿದ್ದರೆ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು. ಸಭೆಗೆ ಆಗಮಿಸಿ ಗಣಿ ವ್ಯವಸ್ಥಾಪಕರಿಗೆ ಸುರಕ್ಷತಾ ಕ್ರಮವಹಿಸುವಂತೆ ಸೂಚಿಸಲಾಯಿತು.