ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ತಾಲೂಕಿನ ಕರೂರ-ಹುಣಸಿಕಟ್ಟೆ-ಚಳಗೇರಿ ಗ್ರಾಮ ವ್ಯಾಪ್ತಿಯಲ್ಲಿ ಕೃಷ್ಣಮೃಗಗಳಿಗಾಗಿ ಕಾಯ್ದಿಟ್ಟ ಅಭಿಯಾರಣ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ವನ್ಯಜೀವಿ ಸಂಕುಲ ಬೆಚ್ಚಿಬಿದ್ದಿದೆ.
ಕಳೆದ ನಾಲ್ಕೈದು ತಿಂಗಳಿಂದ ಚಳಗೇರಿ, ಕರೂರ ಭಾಗದ ಕೆಲವರು ರಾಜಾರೋಷವಾಗಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ. ಅರಣ್ಯದೊಳಗೆ ಕಳ್ಳ ದಾರಿ ಮಾಡಿಕೊಂಡು ಯಂತ್ರಗಳ ಮೂಲಕ ಕಲ್ಲು ಅಗೆಯಲಾಗುತ್ತಿದೆ. ಅಲ್ಲದೆ, ಕಲ್ಲುಗಳನ್ನು ಹಗಲಲ್ಲೇ ರಾಜಾರೋಷವಾಗಿ ಟ್ರ್ಯಾಕ್ಟರ್, ಲಾರಿಗಳ ಮೂಲಕ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದಾರೆ. ನಿತ್ಯವೂ ಅರಣ್ಯ ಪ್ರದೇಶದಲ್ಲಿ ಓಡಾಡುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಅಕ್ರಮ ಗಣಿಕಾರಿಕೆ ಕಾಣಿಸುತ್ತಿಲ್ಲ. ಕಲ್ಲು ತುಂಬಿದ ವಾಹನಗಳು ಅರಣ್ಯ ಇಲಾಖೆ ಕಚೇರಿ ಮುಂದೆ ಓಡಾಡುತ್ತಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಬೀಟ್ ಸಂಚಾರ ಮಾಡುವ ಅರಣ್ಯಾಧಿಕಾರಿಗಳು ಮಾತ್ರ ಅಕ್ರಮ ದಂಧೆ ಕಂಡರೂ ಜಾಣಕುರುಡುತನ ಪ್ರದರ್ಶಿಸುತ್ತಿರುವುದು ಪರಿಸರ ಹಾಗೂ ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.
ವನ್ಯಜೀವಿಗಳಿಗೆ ಪ್ರಾಣ ಸಂಕಟ: ಕಲ್ಲು ಗಣಿಗಾರಿಕೆ ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ದಂಧೆಕೋರರು ಅರಣ್ಯ ಪ್ರದೇಶದ ಮಧ್ಯಭಾಗ ಆಯ್ದುಕೊಂಡಿದ್ದಾರೆ. ಈ ಪ್ರದೇಶದಲ್ಲಿ ಸಾವಿರಾರು ಕೃಷ್ಣಮೃಗ, ಜಿಂಕೆ, ಮೊಲ, ನವಿಲು ಸೇರಿ ವನ್ಯಜೀವಿಗಳು ವಾಸವಾಗಿವೆ. ಅಲ್ಲದೆ, ವನ್ಯಜೀವಿಗಳನ್ನು ಬೇಟೆಯಾಡುವ ಚಿರತೆ, ಮಾಂಸಹಾರಿಯಾದ ನರಿ, ಕತ್ತೆಕಿರುಬಗಳು ಇಲ್ಲಿ ಆಶ್ರಯ ಪಡೆದಿವೆ. ದಂಧೆಕೋರರು ಕಲ್ಲುಗಳನ್ನು ಸ್ಪೋಟಿಸಲು ಸಿಡಿಮದ್ದು ಬಳಸುತ್ತಿದ್ದಾರೆ. ಇದರಿಂದ ಹೊರಸೂಸುವ ಶಬ್ದ ಹಾಗೂ ಸ್ಪೋಟದಿಂದ ಚಿಮ್ಮಿ ಬರುವ ಕಲ್ಲಿನ ತುಣುಕಿಗಳ ಏಟಿನಿಂದ ವನ್ಯಜೀವಿಗಳು ಅರಣ್ಯ ತೊರೆಯುತ್ತಿವೆ. ಕೃಷ್ಣಮೃಗ, ಚಿಂಕೆ, ಮೊಲ, ನವಿಲುಗಳು ಆಹಾರ ಹಾಗೂ ಆಶ್ರಯ ಅರಸಿ ರೈತರ ಹೊಲಗಳತ್ತ ಮುಖ ಮಾಡುತ್ತಿವೆ. ಈ ಪ್ರಾಣಿಗಳನ್ನೇ ಆಹಾರ ಮಾಡಿಕೊಂಡಿದ್ದ ಚಿರತೆಗಳು ಕಾಡುಬಿಟ್ಟು ಸುತ್ತಲಿನ ಗ್ರಾಮಗಳಿಗೆ ನುಗ್ಗಿ ಕುರಿ, ನಾಯಿ ಬೇಟೆಯಾಡಲಾರಂಭಿಸಿವೆ.
ಜೀವದ ಮೇಲೆ ಆಸೆ ಇಲ್ವಾ
ಕಲ್ಲು ಗಣಿಗಾರಿಕೆ ಮಾಡುವ ಪ್ರದೇಶಕ್ಕೆ ಯಾರಾದರೂ ತೆರಳಲು ಮುಂದಾದರೆ, ಆರಂಭದಲ್ಲಿ ಅವರನ್ನು ತಡೆಯುವ ದಂಧೆಕೋರರು ‘ಯಾಕಯ್ಯ ಜೀವದ ಮೇಲೆ ಆಸೆ ಇಲ್ವಾ, ಒಳಗೆ ಹೋದ್ರೆ ನೀನ್ ವಾಪಸ್ ಬರ್ತಿ ಅಂತಾ ಅಂದ್ಕೊಂಡಿದಿಯಾ. ನಡೆ ನಡೆ ಮನೆಗೆ ಹೋಗು’ ಎಂದು ಧಮ್ಕಿ ಹಾಕಿ ವಾಪಸ್ ಕಳುಹಿಸುತ್ತಿದ್ದಾರೆ ಎಂದು ಗಣಿಗಾರಿಕೆ ನಡೆಯುವ ಅರಣ್ಯ ಪ್ರದೇಶಕ್ಕೆ ಫೋಟೊ ತೆಗೆಯಲು ಹೋದ ಪರಿಸರ ಪ್ರೇಮಿಯೊಬ್ಬರು ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡರು.
ಅರಣ್ಯದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಕುರಿತು ನಮಗೆ ಮಾಹಿತಿಯಿಲ್ಲ. ಕೂಡಲೇ ನಮ್ಮ ಸಿಬ್ಬಂದಿ ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಲಾಗುವುದು. ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಅದನ್ನು ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
| ಅಬ್ದುಲ್ ಅಜೀಜ್ ಶೇಖ್, ಜಿಲ್ಲಾ ಅರಣ್ಯಾಧಿಕಾರಿ, ಹಾವೇರಿ