ರಾಮನಗರದಲ್ಲಿ ರಾಗಿ ಬಿತ್ತನೆ ಚುರುಕು

Rmgm-Ph-01-Fokash Story - Raitha - Ragi -Bittane-Photo-29-7-2025
Published on

* ಮಳೆಯಾಶ್ರಿತ ಪ್ರದೇಶದಲ್ಲಿ ಭೂಮಿ ಹಸನು ಕಾರ್ಯ

* ರೈತರಲ್ಲಿ ಮೊಗದಲ್ಲಿ ಮಂದಹಾಸ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ವಾರದಿಂದ ತಾಲೂಕಿನಲ್ಲಿ ಮುಂಗಾರು ಚುರುಕಾಗಿದ್ದು, ಜತೆಗೆ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ರೈತರು ರಾಗಿ ಬಿತ್ತನೆಯತ್ತ ಮುಖ ಮಾಡಿದ್ದಾರೆ.

ರಾಮನಗರ ತಾಲೂಕಿನಲ್ಲಿ ಮಳೆಯಾಶ್ರಿತ ಪ್ರದೇಶವೇ ಅಧಿಕವಾಗಿದೆ. ವಾಣಿಜ್ಯ ಬೆಳೆಯಾಗಿ ಮಾವು, ರೇಷ್ಮೆ ನಂಬಿರುವ ರೈತರು ಉಪ ಕಸುಬಾಗಿ ಹೈನೋದ್ಯಮದಲ್ಲಿ ತೊಡಗಿದ್ದಾರೆ.

ಮಳೆಯಾಶ್ರಿತ ಪ್ರದೇಶದಲ್ಲಿ ರಾಗಿ ಬೆಳೆ ಅವಲಂಬಿಸಿರುವ ರೈತರು ಪ್ರತಿವರ್ಷ ಜುಲೈ ಮೊದಲ ವಾರದಿಂದಲೇ ರಾಗಿ ಬಿತ್ತನೆ ಪ್ರಾರಂಭ ಮಾಡುತ್ತಾರೆ. ಆದರೆ ಈ ಬಾರಿ ಜುಲೈ ಕೊನೇ ವಾರದಲ್ಲಿ ಮುಂಗಾರು ಆಶಾದಾಯಕವಾಗಿದ್ದು, ರೈತರು ಭೂಮಿ ಹಸನು ಮಾಡಿ ರಾಗಿ ಬಿತ್ತನೆ ಮಾಡಲು ಶುರು ಮಾಡಿದ್ದಾರೆ.

ಕೂರಿಗೆ ಬಿತ್ತನೆ

ರೈತರು ಯಂತ್ರಚಾಲಿತ ಟ್ರ್ಯಾಕ್ಟರ್ ​ಗಳಲ್ಲಿ ಉಳುಮೆ ಮಾಡಿಸಿ ಜಮೀನು ಹಸನುಗೊಳಿಸಿದರೂ ಬಿತ್ತನೆಯಲ್ಲಿ ಹಸು, ಎತ್ತುಗಳ ಮುಖಾಂತರ ರಾಗಿ ಬಿತ್ತನೆ ನಡೆಸುತ್ತಾರೆ. ವಿಶೇಷವಾಗಿ ಕೂರಿಗೆ ಬಿತ್ತನೆಯೇ ಹೆಚ್ಚು. ಇದರಿಂದಾಗಿ ರಾಗಿ ಸಮ ಪ್ರಮಾಣದಲ್ಲಿ ಭೂಮಿಗೆ ಬಿದ್ದು, ಉತ್ತಮ ಫಸಲು ಬಂದು ಕೊಯ್ಲಿಗೆ ಮತ್ತು ಕಳೆ ನಾಶ ಪಡಿಸಲು ಸಹಕಾರಿಯಾಗುತ್ತದೆ ಎಂಬುದು ರೈತರ ಮಾತು.

ಅಧಿಕ ಇಳುವರಿಗೆ ಕೊಟ್ಟಿಗೆ ಗೊಬ್ಬರ ಬಳಸಿ

ಸುಮಾರು 120 ದಿನದಲ್ಲಿ ಕೊಯ್ಲಿಗೆ ಬರುವ ಎಂ.ಆರ್​.1 ಮತ್ತು ಎಂ.ಆರ್​. 6 ಹಾಗೂ 105 ದಿನಗಳಲ್ಲಿ ಕೊಯ್ಲಿಗೆ ಬರುವ ಜಿಪಿ 28 ತಳಿಯ ಅಲ್ಪಾವಧಿ ತಳಿ ರಾಗಿ ಬಿತ್ತನೆ ಮಾಡಲಾಗುತ್ತಿದೆ. ಇದಕ್ಕು ಮೊದಲು ಕಾಂಪ್ಲೆಕ್ಸ್​ ರಸಗೊಬ್ಬರಗಳಾದ 10:26:26 ಮತ್ತು 20:2:0:13, ಜಿಂಕ್​ ಸಲ್​ಪೇಟ್​ ಬೋರಾಕ್ಸ್​ ಲು ಪೋಷಕಾಂಶ ಹಾಗೂ ಇನ್ನಿತರ ಕಾಪ್ಲೆಕ್ಸ್​ ರಸಗೊಬ್ಬರಗಳನ್ನು ಹಾಕಿ ಉಳುಮೆ ಮಾಡಬೇಕು. ಬಿತ್ತನೆ ಸಮಯದಲ್ಲಿ ರೈತರು ಶೇ.50 ಭಾಗ ಮಾತ್ರ ಶಿಫಾರಸು ಮಾಡಿದ ಸಾರಜನಕ ಒದಗಿಸುವ ರಸಗೊಬ್ಬರ ಬಳಸಿ, ಕೊಟ್ಟಿಗೆ ಗೊಬ್ಬರ ಹೆಚ್ಚಿಗೆ ನೀಡಬೇಕು. ಇದರಿಂದ ಇಳುವರಿ ಮತ್ತು ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಬಿತ್ತನೆ ಪ್ರದೇಶ

ಕೃಷಿ ಇಲಾಖೆ ಅಂದಾಜಿನ ಪ್ರಕಾರ ಒಟ್ಟಾರೆ ಸುಮಾರು 6,170 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಪ್ರಸ್ತುತ 694 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆಗಸ್ಟ್​ ತಿಂಗಳ ಕೊನೆವರೆಗೂ ಬಿತ್ತನೆಗೆ ಅವಕಾಶವಿದೆ. ರಾಗಿ 4450 ಹೆಕ್ಟೇರ್​ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ 300 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಭತ್ತ 486, ತೊಗರಿ 150, ಹುರುಳಿ 600, ಹಲಸಂದೆ 50, ಅವರೆ 200 ಹೆಕ್ಟೇರ್​ ಪ್ರದೇಶದಲ್ಲಿ ದ್ವಿದಳ ಧಾನ್ಯಗಳ ಬಿತ್ತನೆ ಗುರಿ ಹೊಂದಲಾಗಿದೆ.

ಮಳೆ ಪ್ರಮಾಣ

ಮುಂಗಾರು ಹಂಗಾಮಿನ ಜೂನ್​ 1 ರಿಂದ ಜುಲೈ 28ರವರೆಗೆ ವಾಡಿಕೆ ಮಳೆ 161.8 ಮಿ.ಮೀ. ಆಗಿದ್ದು, ವಾಸ್ತವವಾಗಿ 122.5 ಮಿ.ಮೀ. ಆಗಿದೆ. ಶೇ.24 ಮಳೆ ಕೊರತೆಯಾಗಿದೆ.

ಜುಲೈ ಮೊದಲ ವಾರದಿಂದಲೇ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಶುರುವಾಗುತ್ತದೆ. ಕಳೆದ ವಾರದಿಂದ ಮಳೆ ಆಗುತ್ತಿದ್ದು, ಭೂಮಿ ಹಸನು ಮಾಡಿ ಬಿತ್ತನೆ ಕಾರ್ಯ ಮಾಡಲಾಗುತ್ತಿದೆ. ಇನ್ನೂ ಸಾಕಷ್ಟು ರೈತರು ಭೂಮಿ ಹಸನು ಮಾಡಬೇಕಿದೆ. ಮುಂದೆ ಮಳೆ ಕೊರತೆಯಾಗದಿದ್ದರೆ ರೈತರು ಸಂಪೂರ್ಣವಾಗಿ ಆಗಸ್ಟ್​ ಎರಡನೇ ವಾರದವರೆಗೂ ಬಿತ್ತನೆ ಮಾಡಬಹುದು.

> ನೆಲಮಲೆ ಸುಕೃತ್​, ವಿಎಸ್​ಎಸ್​ಎನ್​ ಉಪಾಧ್ಯಕ್ಷ ಅವ್ವೇರಹಳ್ಳಿ

ಕಳೆದ ವಾರದಿಂದ ಬೀಳುತ್ತಿರುವ ಮುಂಗಾರು ಮಳೆ ರಾಗಿ ಬಿತ್ತನೆಗೆ ಪೂರಕವಾಗಿದೆ. ರೈತರು ಈಗಾಗಲೇ ಬಿತ್ತನೆ ಕಾರ್ಯ ನಡೆಸುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅಗತ್ಯವಾದ ಬಿತ್ತನೆ ರಾಗಿ, ದ್ವಿದಳ ಧಾನ್ಯ, ಕೃಷಿ ಯಂತ್ರೋಪಕರಣಗಳನ್ನು ಸಹಾಯ ಧನದಲ್ಲಿ ನೀಡುತ್ತಿದೆ. ರೈತರ ಬಿತ್ತನೆ ಕಾರ್ಯಕ್ಕೆ ರಸಗೊಬ್ಬರ ತಾಲೂಕಿನಲ್ಲಿ ಕೊರತೆಯಾಗದಂತೆ ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. > ಎಚ್​.ಆರ್​.ಪ್ರಮೋದ್​ಕುಮಾರ್​,ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net