ರೇಣುಕಾ ಮಂದಿರದಲ್ಲಿ ಕ್ಷೀರ ಕುಂಭೋತ್ಸವ 26ರಂದು

22-RNR-07
Published on

ಹಾವೇರಿ: ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ನಿಮಿತ್ತ ಮಾ. 26ರಂದು ನಗರದ ರೇಣುಕಾ ಮಂದಿರದಲ್ಲಿ ಬೆಳಗ್ಗೆ ಕ್ಷೀರ ಕುಂಭೋತ್ಸವ ಹಾಗೂ ರೇಣುಕಾಚಾರ್ಯರ ಮೂರ್ತಿಗೆ ಕ್ಷೀರಾಭಿಷೇಕ ಸೇರಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಸರಳ ಹಾಗೂ ಸಾಂಕೇತಿಕವಾಗಿ ನಡೆಯಲಿವೆ ಎಂದು ನಗರದ ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ತಿಳಿಸಿದರು.

ನಗರದ ರೇಣುಕ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ಪುರೋಹಿತ ಘಟಕದ ನೇತೃತ್ವದಲ್ಲಿ ಅಂದು ಬೆಳಗ್ಗೆ 6.30ಕ್ಕೆ ನಗರದ ವೀರಭದ್ರೇಶ್ವರ ದೇವಸ್ಥಾನದಿಂದ ಕ್ಷೀರ ಕುಂಭೋತ್ಸವ ಆರಂಭವಾಗಿ ರೇಣುಕಾ ಮಂದಿರ ತಲುಪುವುದು. ನಂತರ ನಡುವಿನಮಠದಲ್ಲಿರುವ ರೇಣುಕಾಚಾರ್ಯರ ಮೂರ್ತಿಗೆ ಕ್ಷೀರಾಭಿಷೇಕ ಮಾಡಲಾಗುವುದು. ತದನಂತರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ ಎಂದರು.

ಪ್ರತಿ ವರ್ಷ ಮಠದ ಆಶ್ರಯದಲ್ಲಿ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗುತ್ತಿದ್ದು, ಈ ಬಾರಿ ಕೋವಿಡ್ ಇರುವುದರಿಂದ ಸರಳ ಹಾಗೂ ಸಾಂಕೇತಿಕವಾಗಿ ಆಚರಣೆ ಮಾಡಲಾಗುವುದು. ವಿವಾಹವಾಗಲಿಚ್ಛಿಸುವ ವಧು-ವರರು ನೋಂದಣಿ ಮಾಡಿಸಿಕೊಂಡಿದ್ದರೆ, ಅವರಿಗೆ ಸರಳ ಮದುವೆ ಮಾಡಿಸಿ ಕಳುಹಿಸಲಾಗುವುದು ಎಂದರು.

ಅದೇ ದಿನ ಸಂಜೆ 5.30ಕ್ಕೆ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಉತ್ಸವಕ್ಕೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಸರ್ಕಾರದ ಕೋವಿಡ್ ನಿಯಮಾವಳಿಯನ್ವಯ ಮಾಸ್ಕ್ ಧರಿಸಿ ಪರಸ್ಪರ ಅಂತರವನ್ನು ಕಾಯ್ದುಕೊಂಡು ಭಾಗವಹಿಸಬೇಕು ಎಂದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ಪುರೋಹಿತ ಘಟಕದ ಉಪಾಧ್ಯಕ್ಷ ಶಂಭುಲಿಂಗಯ್ಯ ಮಹಾಂತಿನಮಠ, ಜಿಲ್ಲಾಧ್ಯಕ್ಷ ಜಗದೀಶ ಶಾಸ್ತ್ರೀಗಳು, ಷಣ್ಮುಖಯ್ಯ ಶಾಸ್ತ್ರಿಗಳು, ಸಿದ್ದಲಿಂಗಯ್ಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net