

ಮದ್ದೂರು: ಜಿಲ್ಲಾ ಹಾಲು ಒಕ್ಕೂಟದಿಂದ ಜಾನುವಾರುಗಳಿಗೆ ವಿತರಿಸುತ್ತಿರುವ ಪಶು ಆಹಾರ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ಹಾಲು ಉತ್ಪಾದಕರು ಚನ್ನಸಂದ್ರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ರಾಸುಗಳೊಂದಿಗೆ ಸೋಮವಾರ ಪ್ರತಿಭಟನೆ ನಡೆಸಿದರು.
ಕಳಪೆ ಪಶು ಆಹಾರ ನೀಡಿ ಜಾನುವಾರುಗಳ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತೆಂಗು ಬೆಳೆಗಾರ ಸಂಘದ ಅಧ್ಯಕ್ಷ ಲಕ್ಷ್ಮಣ್ ಚನ್ನಸಂದ್ರ ಮಾತನಾಡಿ, ಮನಮುಲ್ ವತಿಯಿಂದ ವಿತರಿಸುತ್ತಿರುವ ಪಶು ಆಹಾರ ಕಳಪೆಯಾಗಿದೆ. ಈ ಆಹಾರವನ್ನು ತಿಂದ ರಾಸುಗಳು ಅಸ್ವಸ್ಥಗೊಳ್ಳುವ ಜತೆಗೆ, ಗಣನೀಯ ಪ್ರಮಾಣದಲ್ಲಿ ಹಾಲನ್ನು ಕಡಿಮೆ ನೀಡುತ್ತಿವೆ. ಅಲ್ಲದೆ, ಗರ್ಭವನ್ನು ಧರಿಸುತ್ತಿಲ್ಲ ಎಂದು ಆರೋಪಿಸಿದರು.
ಹಲವು ದಿನಗಳಿಂದ ಗ್ರಾಮದಲ್ಲಿ 50ಕ್ಕೂ ಹೆಚ್ಚು ರಾಸುಗಳು ಈ ರೀತಿ ಅಸ್ವಸ್ಥಗೊಂಡಿವೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೆ ರಾಸುಗಳನ್ನು ತಪಾಸಣೆ ಮಾಡಲು ವೈದ್ಯರು ಹಾಗೂ ಸಿಬ್ಬಂದಿ ಬಾರದೆ ಉಡಾಫೆಯಾಗಿ ವರ್ತನೆ ಮಾಡುತ್ತಿದ್ದಾರೆ. ಇಂತಹ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಒಕ್ಕೂಟ ಲೀಟರ್ ಹಾಲಿಗೆ 1.50 ರೂ. ಕಡಿಮೆ ಮಾಡಿ ಪಶು ಆಹಾರ ದರ ಹೆಚ್ಚಿಸಿದೆ. ದರ ಹೆಚ್ಚಿಸಿದರೂ ಗುಣಮಟ್ಟದ ಪಶು ಆಹಾರ ನೀಡುತ್ತಿಲ್ಲ. ಅಧಿಕಾರಿಗಳು ಕಮಿಷನ್ ಆಸೆಗೆ ಕಳಪೆ ಆಹಾರ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಹಾಲು ಒಕ್ಕೂಟಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.
ಪ್ರಕಾಶ್ ಬಾಬು, ಪ್ರಮೋದ್, ಸಿ.ರಾಜು, ವಿಜಯ್, ಜಯಲಕ್ಷ್ಮೀ, ಚಂದ್ರಮ್ಮ, ರವೀಶ್, ಸೋಮ, ರಮೇಶ್, ಲೋಕೇಶ್ ಬಾಬು, ಮಹದೇವ, ಸುರೇಶ್, ಕೃಷ್ಣ ಇತರರಿದ್ದರು.