ಹಾಲು ಉತ್ಪಾದಕರ ಗೋಳು ಕೇಳುವವರೇ ಇಲ್ಲ

web 3
Published on

ಖರೀದಿ ದರ ಹೆಚ್ಚಿಸಲು ಮೀನಮೇಷ 2 ವರ್ಷದಲ್ಲಿ 3 ಬಾರಿ ಬೆಲೆ ಹೆಚ್ಚಿಸಿ ಗ್ರಾಹಕರಿಂದ ವಸೂಲಿ

ಬಾಗೇಪಲ್ಲಿ: ಎರಡು ವರ್ಷಗಳ ಅವಧಿಯಲ್ಲಿ ನಂದಿನಿ ಹಾಲಿನ ಬೆಲೆಯನ್ನು ಮೂರು ಬಾರಿ ಏರಿಕೆ ಮಾಡಿ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿರುವ ಕೋಚಿಮುಲ್ ಮತ್ತು ಚಿಮುಲ್ ಒಕ್ಕೂಟಗಳು, ರೈತರು ಪೂರೈಸುವ ಹಾಲಿನ ಬೆಲೆ ಹೆಚ್ಚಿಸಲು ಮೀನಮೇಷ ಎಣಿಸುತ್ತಿವೆ. ಇದರಿಂದ ಹೈನುಗಾರಿಕೆ ಅವಲಂಬಿತರ ಗೋಳು ಕೇಳುವವರೇ ಇಲ್ಲದಂತಾಗಿದೆ.
2 ವರ್ಷದಲ್ಲಿ ಹೆಚ್ಚಿಸಿದ್ದು 1 ರೂ. ಮಾತ್ರ
ಬಾಗೇಪಲ್ಲಿ ತಾಲೂಕಿನಲ್ಲಿ ಡೇರಿಗಳಿಗೆ ರೈತರು ಪೂರೈಸುವ ಪ್ರತಿ ಲೀಟರ್ ಹಾಲಿಗೆ 2023ರ ಮಾರ್ಚ್ ತಿಂಗಳಲ್ಲಿ 30 ರೂ. ನೀಡಲಾಗುತ್ತಿತ್ತು. ಈ ದರ 2025ರ ಮಾರ್ಚ್‌ನಲ್ಲಿ ಪ್ರತಿ ಲೀಟರ್‌ಗೆ 31.15 ರೂ. ಇದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪ್ರತಿ ಲೀಟರ್ ಹಾಲಿಗೆ ಚಿಮುಲ್‌ನಿಂದ 1 ರೂಪಾಯಿ ಮಾತ್ರ ಹೆಚ್ಚಿಸಲಾಗಿದೆ.
ನಂದಿನಿ ಹಾಲಿನ ಬೆಲೆ ಮೂರು ಬಾರಿ ಏರಿಕೆ
ವರ್ಷದ ಹಿಂದೆ ಪ್ರತಿ ಲೀಟರ್‌ಗೆ 3 ರೂ., ಎರಡನೇ ಬಾರಿ ಪ್ರತಿ ಲೀಟರ್‌ಗೆ 2 ರೂ. (ಅರ್ಧ ಮತ್ತು ಒಂದು ಲೀಟರ್ ಹಾಲಿನ ಪ್ಯಾಕೇಟ್‌ನೊಂದಿಗೆ 50 ಮಿ.ಗ್ರಾಂ ಹಾಲು ಸೇರಿಸಿ), ಏ.1ರಿಂದ ಒಂದು ಲೀಟರ್ ಹಾಲಿನ ಮೇಲೆ 4 ರೂ. ನಂದಿನ ಹಾಲಿನ ದರ ಹೆಚ್ಚಿಸಲಾಗಿದೆ. ಏ.1ರಿಂದ ಹೊಸ ದರ ಜಾರಿಗೆ ಬರಲಿದೆ.
2 ವರ್ಷದಲ್ಲಿ ಪಶು ಆಹಾರದ ಬೆಲೆ 290 ರೂ. ಹೆಚ್ಚಳ
2023ನೇ ಸಾಲಿನಲ್ಲಿ 50 ಕೆ.ಜಿ. ತೂಕದ 1 ಚೀಲ ಪಶು ಆಹಾರದ (ಫೀಡ್ಸ್) ಬೆಲೆ 900ರಿಂದ 950 ರೂ.ಗಳಷ್ಟಿತ್ತು. 2025ರಲ್ಲಿ ಈ ದರ 1240 ರೂ. ಆಗಿದೆ. ಎರಡು ವರ್ಷದ ಅವಧಿಯಲ್ಲಿ ಒಂದು ಚೀಲದ ಮೇಲೆ 250 ರೂ. ಏರಿಕೆ ಆದಂತಾಗಿದೆ. ಒಂದು ಸೀಮೆಹಸುವಿಗೆ ದಿನಕ್ಕೆ ಕನಿಷ್ಠ 3ರಿಂದ 4 ಕೆಜಿಯಂತೆ ತಿಂಗಳಿಗೆ ಕನಿಷ್ಠ 3 ಚೀಲ ಪಶು ಆಹಾರ ಬೇಕಾಗುತ್ತದೆ. ಇದರಿಂದ ರೈತರಿಗೆ ತಿಂಗಳಿಗೆ ಸರಾಸರಿ 750 ರೂ. ಹೆಚ್ಚುವರಿ ನಿರ್ವಹಣಾ ವೆಚ್ಚ ಭರಿಸಬೇಕಿದೆ. ಜತೆಗೆ ಹಾಲಿನ ಕೊಬ್ಬಿನಾಂಶ, ಗುಣಮಟ್ಟದ ಆಧಾರದ ಮೇಲೆ ಪ್ರತಿ ಲೀಟರ್ ಹಾಲಿನ ದರ ನಿಗದಿ ಪಡಿಸಿದ್ದು, ಇದರಿಂದ ಉತ್ಪಾದಕರಿಗೆ ನಿರೀಕ್ಷೆಯಂತೆ ಲಾಭ ಗಳಿಸಲು ಸಾಧ್ಯವಾಗುತ್ತಿಲ್ಲ,
ನಷ್ಟದ ಹಾದಿಯಲ್ಲಿ ಸಂಘಗಳು
ಚಿಮುಲ್ ಹಾಗೂ ಸ್ಥಳೀಯ ಹಾಲು ಉತ್ಪಾದಕ ಸಂಘಗಳು ನೀಡುವ ಹಾಲಿನ ದರ (ಕೊಬ್ಬಿನಾಂಶದ ಆಧಾರದಂತೆ) ದಲ್ಲಿ ಭಾರಿ ವ್ಯತ್ಯಾಸವಿರುವುದರಿಂದ ಸ್ಥಳೀಯ  ಸಂಘಗಳು ನಷ್ಟದತ್ತ ಸಾಗುತ್ತಿವೆ. ಇದರ ಜತೆಗೆ ಚಿಮುಲ್ ಒಕ್ಕೂಟ ನಿರ್ವಹಣಾ ವೆಚ್ಚದ ರೂಪದಲ್ಲಿ ಪ್ರತಿ ಲೀಟರ್ ಹಾಲಿಗೆ 1 ರೂ. ಕಡಿತಗೊಳಿಸುವ ಹೊಸ ನಿಯಮದಿಂದ ಸ್ಥಳೀಯ ಹಾಲು ಸಂಘಗಳು ಮತ್ತಷ್ಟು ನಷ್ಟಕ್ಕೆ ಗುರಿಯಾಗಿ ಸಣ್ಣಪುಟ್ಟ ಡೇರಿಗಳು ಮುಚ್ಚುತ್ತಿವೆ.

"ಗ್ರಾಹಕರು ಖರೀದಿಸುವ ನಂದಿನಿ ಹಾಲಿನ ದರ 4 ರೂ. ಏರಿಕೆ ಮಾಡಿರುವ ಸರ್ಕಾರದ ತೀರ್ಮಾನ ಸ್ವಾಗತಾರ್ಹ. ಈ ಹಣವನ್ನು ಹಾಲು ಉತ್ಪಾದಕರಿಗೆ ನೀಡುವುದಾಗಿ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳ ಬೇಡಿಕೆಗೆ ಅನುಗುಣವಾಗಿ ದರ ವ್ಯತ್ಯಾಸ ಆದಾಗ ಲಾಭ, ನಷ್ಟದ ಲೆಕ್ಕಾಚಾರ ಹಾಕಿ ವಾಡಿಕೆಯಂತೆ ಹಾಲಿನ ಬೆಲೆ ಏರಿಕೆ ಮತ್ತು ಇಳಿಕೆ ಬಗ್ಗೆ ಒಕ್ಕೂಟ ತೀರ್ಮಾನಿಸುತ್ತದೆ." - ವಿ.ಮಂಜುನಾಥರೆಡ್ಡಿ, ಕೋಚಿಮುಲ್ ಮಾಜಿ ನಿರ್ದೇಶಕ, ಬಾಗೇಪಲ್ಲಿ

"ಮೇವಿನ ಅಭಾವದ ನಡುವೆಯೂ ಗುಣಮಟ್ಟದ ಹಾಲು ಪೂರೈಸುತ್ತಿರುವ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಚಿಮುಲ್ ತೀರ್ಮಾನ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಪ್ರತಿ ಲೀಟರ್ ಹಾಲಿಗೆ ಕನಿಷ್ಠ 45 ರೂ. ನಿಗದಿ ಮಾಡಿ ಉತ್ಪಾದಕರನ್ನು ಬೆಂಬಲಿಸಬೇಕಿದೆ." - ಕವಿತಾ, ನಿರ್ದೇಶಕಿ, ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ, ಶಂಕಂವಾರಪಲ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net