ಹಾಲಿನ ದರ ಏರಿಕೆಗೆ ರೈತಸಂಘ ಪಟ್ಟು

FotoJet (1)
Published on

ಪೆ.10ರಂದು ಧರಣಿ ಪ್ರತಿ ಲೀಟರ್‌ಗೆ 50 ರೂ. ನಿಗದಿಗೆ ಬೇಡಿಕೆ

ಶಿಡ್ಲಘಟ್ಟ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಫೆ.10ರಂದು ಬೆಂಗಳೂರಿನ ಕರ್ನಾಟಕ ಹಾಲು ಮಹಾ ಮಂಡಳಿ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.

ನಗರದ ರೈತ ಸಂಘದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಲಿನ ಬಾಕಿ ಹಣ ನೀಡಬೇಕು ಹಾಗೂ ಹಾಲಿನ ಖರೀದಿ ದರ ಹೆಚ್ಚಿಸಲು ಒತ್ತಾಯಿಸಿ ಪ್ರತಿಭಟಿಸಲಾಗುವುದು ಎಂದರು.

ನೀರಿಗೆ ಬರವಿದ್ದರೂ ಹಾಲಿಗೆ ಬರವಿಲ್ಲದಂತಹ ನಾಡು ನಮ್ಮದು. ಸುಮಾರು 25 ಲಕ್ಷ ರೈತ ಕುಟುಂಬಗಳು 15,450 ಹಾಲು ಉತ್ಪಾದಕರ ಸಂಘಗಳ ಮೂಲಕ 16 ಹಾಲು ಮಹಾ ಮಂಡಳಿಗಳಿಗೆ ಪ್ರತಿದಿನ 80 ಲಕ್ಷ ಲೀಟರ್ ಹಾಲು ಪೂರೈಸುತ್ತಿವೆ. ಪಶು ಆಹಾರದ ಜತೆಗೆ ಬೂಸಾ, ಹಿಂಡಿ, ಚಕ್ಕೆ ಮಿಶ್ರಣ ಎಲ್ಲದರ ಬೆಲೆ ಏರಿದೆ. ಅಂಕಿಅಂಶಗಳ ಪ್ರಕಾರ ಹಾಲಿನ ಉತ್ಪಾದನೆಗೆ 50 ರೂ. ಖರ್ಚು ಬರುತ್ತಿದೆ. ಸ್ವಾಮಿನಾಥನ್ ವರದಿಯಂತೆ ಪ್ರತಿ ಲೀಟರ್ ಹಾಲಿಗೆ 76 ರೂ. ನೀಡಬೇಕಿದೆ. ಆದರೆ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದರು.ರೈತ ಸಂಘದ ಮುನಿನಂಜಪ್ಪ, ಕೆಂಪರೆಡ್ಡಿ, ಮಳಮಾಚನಹಳ್ಳಿ ರಮೇಶ್, ದೇವರಾಜ್, ಭೀಮಣ್ಣ, ನಾರಾಯಣಸ್ವಾಮಿ, ನಾಗರಾಜು, ಕೃಷ್ಣಪ್ಪ, ಸೊಣ್ಣಪ್ಪರೆಡ್ಡಿ, ವಾಸುದೇವ್, ರಾಮಚಂದ್ರಪ್ಪ, ಜಗದೀಶ, ಸುಬ್ರಮಣಿ ಇದ್ದರು.

ನೀರಿಗಿಂತ ಹಾಲು ಅಗ್ಗ

ಜ.1ರಿಂದ ಪ್ರತಿ ಲೀಟರ್ ಹಾಲಿಗೆ 5 ರೂ. ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ 35 ದಿನಗಳಾದರೂ ಬೆಲೆ ಏರಿಕೆ ಆಗಿಲ್ಲ. ಕುಡಿಯುವ ನೀರಿಗಿಂತ ಹಾಲು ಅಗ್ಗವಾಗಿರುವುದು ದುರಂತ ಎಂದು ಬೇಸರಿಸಿದರು. ಹಾಲಿಗೆ ಸೂಕ್ತ ಬೆಲೆ ಸಿಗದಿರುವುದೇ ರಾಜ್ಯದಲ್ಲಿ ದಿನೇದಿನೆ ಹಾಲಿನ ಉತ್ಪಾದನೆ ಕುಠಿತವಾಗುತ್ತಿರುವುದಕ್ಕೆ ಕಾರಣ. ರಾಜ್ಯ ಮತ್ತು ಕೇಂದ್ರ ಬಜೆಟ್‌ನಲ್ಲಿ ರೈತರನ್ನು ಕಡೆಗಣಿಸಲಾಗುತ್ತಿದೆ. ನಗರ ಕೇಂದ್ರಿತ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಗ್ರಾಮಗಳನ್ನು ನಿರ್ಲಕ್ಷಿಸಿ, ಜನರು ಗುಳೆ ಹೋಗುವಂತೆ ಮಾಡಲಾಗುತ್ತಿದೆ. ಹೈನೋದ್ಯಮದ ಉಳಿವಿಗಾಗಿ ಪ್ರತಿ ಲೀಟರ್‌ಗೆ ಕನಿಷ್ಠ 50 ರೂ. ಬೆಲೆ ಸಿಗಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net