

ಆನೇಕಲ್: ಪ್ರತಿಷ್ಠಿತ ಬ್ರಾಂಡ್ವುಳ್ಳ ಸಾವಿರಾರು ಲೀಟರ್ ಹಾಲಿನ ಪ್ಯಾಕೇಟ್ಗಳು ಎರಡು ದಿನದಿಂದ ರಸ್ತೆಬದಿಯಲ್ಲೇ ಬಿದ್ದಿದ್ದು, ಕುಡಿಯೋ ಹಾಲು ಇಲ್ಲಿಗ್ಯಾಕೆ ಬಂತು ಎಂಬುದಕ್ಕೆ ಉತ್ತರ ಸಿಗದೆ ಸ್ಥಳೀಯರು ಆತಂಕಗೊಂಡಿದ್ದಾರೆ.
ನಂದಿನಿ, ಅಕ್ಷಯಕಲ್ಪ, ಹೆರಿಟೇಜ್ ಬ್ರಾಂಡ್ನ ಹಾಲಿನ ಪ್ಯಾಕೇಟ್ಗಳು ಆನೇಕಲ್ ತಾಲೂಕಿನ ಹುಸ್ಕೂರು ಆರ್ಟಿಒ ಕಚೇರಿ ಮುಂದೆ ಪತ್ತೆಯಾಗಿವೆ. ಸಾವಿರಾರು ಲೀಟರ್ ಹಾಲನ್ನು ಮಣ್ಣುಪಾಲು ಮಾಡಿರುವುದೇಕೇ? ಇಷ್ಟೊಂದು ಹಾಲಿನ ಪ್ಯಾಕೆಟ್ಗಳು ಎಲ್ಲಿಂದ ಬಂದವು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
ಅದೆಷ್ಟೋ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಪುಟ್ಟ ಕಂದಮ್ಮಗಳಿಗೆ ಕುಡಿಯಲು ಹಾಲು ಕೊಡಿಸುವ ಶಕ್ತಿ ಇಲ್ಲದ ಬಡಜನರು ಲೆಕ್ಕವಿಲ್ಲದಷ್ಟು ಮಂದಿ ನಮ್ಮ ನಡುವೆಯೇ ಇದ್ದಾರೆ. ಅಂತಹದ್ದರಲ್ಲಿ ಅಮೃತಕ್ಕೆ ಸಮಾನವಾದ ಹಾಲನ್ನು ಈ ರೀತಿ ಮಣ್ಣುಪಾಲು ಮಾಡಿದ್ದೇಕೆ ಎಂಬ ಅಸಮಾಧಾನದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.