ಮುಸುಕುದಾರಿಗಳಿಂದ ಮಧ್ಯರಾತ್ರಿ ದಾಂದಲೆ

crime
Published on

ರಾಮನಗರ : ಮುಸುಕು ದಾರಿ ವ್ಯಕ್ತಿಗಳು  ಮಲಗಿದ್ದ ವ್ಯಕ್ತಿ ಒಬ್ಬನ ಮೇಲೆ ಲಾಂಗ್ ನಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ರಾಮನಗರದ ಐಜೂರು ಪೊಲೀಸ್ ಠಾಣೆಯ ಎಂ ಎಚ್ ಶಾಲೆಯ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ. 

ಬುಧವಾರ ಮಧ್ಯರಾತ್ರಿ 12 ರಿಂದ 1  ಗಂಟೆ ಸುಮಾರಿಗೆ 3 ಕಾರುಗಳಲ್ಲಿ  ಬಂದ ಮುಸುಕು ದಾರಿ  ವ್ಯಕ್ತಿಗಳು ಕೊಠಡಿಯಲ್ಲಿ ಮಲಗಿದ್ದವರನ್ನು ನೋಡಿದ್ದಾರೆ. ಆದರೆ ಅವರಿಗೆ ಬೇಕಾದ ವ್ಯಕ್ತಿ ದೊರೆಯದ ಹಿನ್ನೆಲೆಯಲ್ಲಿ ಅದೇ ಮನೆಯ ಮಹಡಿಗೆ ತೆರಳಿದ್ದು ಅಲ್ಲಿ ಇದ್ದಂತಹ ವ್ಯಕ್ತಿಯ ಮೇಲೆ ಲಾಂಗ್ ಬೀಸಿದ್ದಾರೆ. 

 ಈ ವೇಳೆ ಆದರ್ಶ್ ಎನ್ನುವ ವ್ಯಕ್ತಿ ಕೈಗೆ ಗಾಯವಾಗಿದೆ.  ನಂತರ ಗಾಯಾಳುವಿನ ಮೊಬೈಲ್ ನಲ್ಲಿಯೇ ಬ್ಯಾಟರಿ ಬಿಟ್ಟು ಮುಖವನ್ನು ನೋಡಿ ನಾವು ನಮಗೆ ಬೇಕಾದ ವ್ಯಕ್ತಿ ನೀನಲ್ಲ ಎಂದು ತೆರಳಿದ್ದಾರೆ.‌  ಅಪರಿಚಿತರ ದಾಳಿಗೆ ಬೆದರಿದ ಮತ್ತಿಬ್ಬರು ವ್ಯಕ್ತಿಗಳು ಮಹಡಿಯಿಂದ ಜಿಗಿದಿದ್ದಾರೆ ಈ ವೇಳೆ ಒಬ್ಬನಿಗೆ ಕಾಲಿಗೆ ಗಾಯವಾಗಿದ್ದರೆ ಮತ್ತೊಬ್ಬನ ಬೆನ್ನು ಮೂಳೆಗೆ ಪೆಟ್ಟಾಗಿದೆ.

  ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

 ಲಭ್ಯ ಮಾಹಿತಿ ಪ್ರಕಾರ ಸಿದ್ದು ಎಂಬಾತನನ್ನು ಹುಡುಕಿಕೊಂಡು ಬಂದ ಅಪರಿಚಿತರು ಮಾಹಿತಿ ಕೊರತೆಯಿಂದ ಅಮಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ.

ಗಾಯಗೊಂಡವರೆಲ್ಲರೂ ರಾಮನಗರದ ಖಾಸಗಿ ರೆಸಾರ್ಟ್ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.  ಪ್ರಕರಣ ದಾಖಲಿಸಿಕೊಂಡಿರುವ ಐಜೂರು ಠಾಣೆ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೂ ಬಲೆಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net