ಸರ್ಕಾರಿ ಪಿಯು ಕಾಲೇಜು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಆರಂಭ

PU_BISIYuta
Published on

ತುಮಕೂರು: ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಚಾಲನೆ ನೀಡಲಾಯಿತು. ನಗರದ ಬಿ.ಹೆಚ್.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ 530 ವಿದ್ಯಾರ್ಥಿಗಳಿಗೆ ಪಾವಗಡ ರಾಮಕೃಷ್ಣ ಸೇವಾಶ್ರಮ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿ ಆಶ್ರಯದಲ್ಲಿ ಮಧ್ಯಾಹ್ನದ ಭೋಜನ ವಿತರಣಾ ವ್ಯವಸ್ಥೆಗೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಜ್ಯೋತಿಗಣೇಶ್, ಸರ್ಕಾರಿ ಜೂನಿಯರ್ ಕಾಲೇಜಿಗೆ ದೊಡ್ಡ ಇತಿಹಾಸವಿದೆ. ಹೈಸ್ಕೂಲ್, ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಪದವಿ ಕಾಲೇಜು ಇದ್ದು ಈ ಆವರಣದಲ್ಲಿ ಸುಮಾರು 13 ಸಾವಿರ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಸ್ವಾಮೀಜಿ ಅವರು ಮಾಡುತ್ತಿರುವ ದಾಸೋಹ ಸೇವೆ ಮಹತ್ತರವಾದದು ಎಂದು ಬಣ್ಣಿಸಿದರು.

ವಿದ್ಯಾರ್ಥಿಗಳೇ ದೇಶದ ಭವಿಷ್ಯವಾಗಿದ್ದು ಅವರು ದೈಹಿಕ, ಮಾನಸಿಕವಾಗಿ ಸದೃಢವಾಗಿದ್ದರೆ ರಾಷ್ಟ್ರದ ಭವಿಷ್ಯವು ಉಜ್ವಲವಾಗಿರಲಿದೆ. ನವಭಾರತ ನಿರ್ಮಾತೃಗಳೇ ಇಂದಿನ ವಿದ್ಯಾರ್ಥಿಗಳಾಗಿದ್ದು, ಅವರು ಹೊಟ್ಟೆತುಂಬ ಊಟಮಾಡಿ ಗುಣಮಟ್ಟದ ಕಲಿಕೆಯಲ್ಲಿ ತೊಡಗಿದರೆ ಮುಂದೆ ಉನ್ನತ ಅವಕಾಶಗಳನ್ನು ಪಡೆದು ರಾಷ್ಟ್ರ ನಿರ್ಮಾಣಕ್ಕೆ ನೆರವಾಗಬಲ್ಲರು ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಹೇಳಿದರು.

ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ತುಮಕೂರು ವಿವಿಯಲ್ಲಿ ಬಿಸಿಯೂಟ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಅದೇರೀತಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಖ್ಯಾತ ಅಣುವಿಜ್ಞಾನಿ ಡಾ.ರಾಜಾರಾಮಣ್ಣ, ಪೂಜ್ಯ ಡಾ.ಶ್ರೀ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಹಾಗೂ ಟಿ.ಪಿ.ಕೈಲಾಸಂ ಅವರಂತಹ ಮಹಾಪುರುಷರು ಓದಿದ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವ ನೀವೇ ಧನ್ಯರು ಎಂದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನ್ಯಾ.ರತ್ನಕಲಾ, ತುಮಕೂರು ವಿವಿ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು, ಪಿಯು ಡಿಡಿ ಗಂಗಾಧರ್, ಎಸ್.ನಾಗಣ್ಣ , ಸ್ಫೂರ್ತಿಚಿದಾನಂದ್, ದಕ್ಷಿಣಾಮೂರ್ತಿ, ಪ್ರಾಚಾರ್ಯ ರಾಜ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net