ಮೈಕ್ರೋ ಫೈನಾನ್ಸ್ಗಳ ಬಂದ್‌ಗೆ ಪಟ್ಟು

FotoJet (3)
Published on

ಜನವಾದಿ ಮಹಿಳಾ ಸಂಘಟನೆ ಹಾಗೂ ಸಿಪಿಎಂ ಮುಖಂಡರಿಂದ ಪ್ರತಿಭಟನೆ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ

ಗುಡಿಬಂಡೆ: ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಕೂಡಲೇ ಬಂದ್ ಮಾಡುವಂತೆ ಒತ್ತಾಯಿಸಿ ತಾಲೂಕು ಜನವಾದಿ ಮಹಿಳಾ ಸಂಘಟನೆ ಹಾಗೂ ಸಿಪಿಎಂ ಮುಖಂಡರು ಬುಧವಾರ ತಾಲೂಕು ಕಚೇರಿ ಎದುರು ಪ್ರತಿಭಟಿಸಿ ಗ್ರೇಡ್-2 ತಹಸೀಲ್ದಾರ್ ತುಳಸಿ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂಘಟನೆ ತಾಲೂಕು ಕಾರ್ಯದರ್ಶಿ ಭಾಗ್ಯಲಕ್ಷ್ಮೀ ಮಾತನಾಡಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಮಾನ್ಯ ಜನರಿಗೆ ಕಿರುಕುಳ ನೀಡಿ ಬಲವಂತವಾಗಿ ಸಾಲ ವಸೂಲಿ ಮಾಡುತ್ತಿವೆ. ಇದರಿಂದ ಕಿರುಕುಳಕ್ಕೆ ಒಳಗಾದವರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಅವರನ್ನು ನಂಬಿ ಜೀವನ ಸಾಗಿಸುವ ಕುಟುಂಬಸ್ಥರು ಬೀದಿ ಪಾಲಾಗುತ್ತಿದ್ದಾರೆ. ಆದ್ದರಿಂದ ಮೈಕ್ರೋ ಫೈನಾನ್ಸ್ ಲೇವಾದೇವಿ ನಿಯಂತ್ರಣ ಕಾಯ್ದೆ ಜಾರಿಗೆ ತಂದು ತಕ್ಷಣ ಅಂಗೀಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಭಾಗ್ಯಮ್ಮ, ತಾಲೂಕು ಸಿಐಟಿಯು ಕಾರ್ಯದರ್ಶಿ ಮಂಜುಳಾ, ತಾಲೂಕು ಸಮಿತಿ ಸದಸ್ಯರಾದ ಶೋಭಾ, ಅಳವೇಳಮ್ಮ, ಆಯಿಷಾ, ಗೀತಾ ತಾಲೂಕು ಸಿಪಿಎಂ ಮುಖಂಡರಾದ ವೆಂಕಟರಾಜು, ಚನ್ನರಾಯಪ್ಪ, ವೆಂಕಟರಮಣ, ಮುನಿ ವೆಂಕಟಪ್ಪ, ಶ್ರೀನಿವಾಸ ಸೇರಿ ಇತರರಿದ್ದರು.

ಋಣಮುಕ್ತಿ ಆಯೋಗ ಅಗತ್ಯ

ರೈತರು, ಕೂಲಿ ಕಾರ್ಮಿಕರು, ಮಹಿಳೆಯರು ಸೇರಿ ಅಸಂಘಟಿತ ಕಾರ್ಮಿಕರ ಋಣಮುಕ್ತಿಗಾಗಿ ತಾಲೂಕು ಮಟ್ಟದಲ್ಲಿ ಋಣಮುಕ್ತಿ ಆಯೋಗವನ್ನು ಅಸ್ತಿತ್ವಕ್ಕೆ ತಂದು ಮೈಕ್ರೋಫೈನಾನ್ಸ್ ಸಂಸ್ಥೆಗಳ ಸಾಲವನ್ನು ಅದರ ವ್ಯಾಪ್ತಿಗೆ ಒಳಪಡಿಸಬೇಕು. ಸ್ವಸಹಾಯ ಗುಂಪುಗಳ ಸ್ವರೂಪವನ್ನು ಮೊದಲಿನಂತೆ ರಕ್ಷಿಸಿಕೊಂಡು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಜಿಲ್ಲಾ ಸಹಕಾರಿ ಬ್ಯಾಂಕುಗಳ ಬಲವರ್ಧನೆ ಮಾಡಬೇಕು, ಇಲ್ಲವಾದಲ್ಲಿ ರಾಜ್ಯದಲ್ಲಿ ಕಿರುಕುಳಕ್ಕೊಳಗಾದವರ ಸಾವಿನ ಸಂಖ್ಯೆ ಹೆಚ್ಚುತ್ತದೆ, ಕೂಡಲೇ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕೆಂದು ಭಾಗ್ಯಲಕ್ಷ್ಮೀ ತಿಳಿಸಿದರು.

ಕಿರು ಹಣಕಾಸು ಸಂಸ್ಥೆಗಳು ನಿಯಂತ್ರಣಕ್ಕೊಳಪಡಲಿ

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅನೇಕರು ಅಕ್ರಮವಾಗಿ ಹಣಕಾಸು ಸಂಸ್ಥೆಗಳನ್ನು ಪ್ರಾರಂಭಿಸಿ ಬಡ ಕೂಲಿ ಕಾರ್ಮಿಕರಿಗೆ ಸಾಲ ನೀಡಿ ವಸೂಲಿಗಾಗಿ ಪೀಡಿಸುತ್ತಿದ್ದಾರೆ. ಆದ್ದರಿಂದ ಎಲ್ಲ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ನಬಾರ್ಡ್, ಆರ್‌ಬಿಐ ನಿಯಂತ್ರಣಕ್ಕೆ ಒಳಪಡಿಸಬೇಕು. ಆರ್‌ಬಿಐ ನಿಯಮಗಳನ್ವಯ ಬಡವರಿಗೆ ಯಾವುದೇ ದಾಖಲೆ ಪಡೆಯದೇ ಒಂದು ಲಕ್ಷದವರೆಗೆ ಸಾಲ ನೀಡಬೇಕು. ಬಲವಂತವಾಗಿ ಸಾಲ ವಸೂಲಾತಿ ಕ್ರಮಗಳಿಗೆ ಕನಿಷ್ಠ 6 ತಿಂಗಳು ಕಡಿಮೆ ಇಲ್ಲದಂತಹ ಶಿಕ್ಷೆ ಮತ್ತು ಕನಿಷ್ಠ 10 ಸಾವಿರ ರೂ.ನಿಂದ 10 ಲಕ್ಷ ರೂ.ವರೆಗೆ ದಂಡ ವಿಧಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net