ಕನಕಪುರ : ಮೈಕ್ರೋ ಫೈನಾನ್ಸ್ ಕಂಪನಿಯ ಸಾಲ ವಸೂಲಿ ನೌಕರನಿಗೆ ಹಣ ನೀಡುವಂತೆ ಬೆದರಿಕೆ, ಹಲ್ಲೆ ನಡೆಸಿದ ಆರೋಪದ ಮೇರೆಗೆ ಐವರ ವಿರುದ್ಧ ನಗರ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ನಗರದ ಸೌತ್ ಇಂಡಿಯನ್ ಫೈನಾನ್ಸ್ ಕಂಪನಿಯಲ್ಲಿ ಸಾಲ ವಸೂಲಿ ಮಾಡುವ ಪ್ರಮೋದ್ ಎಂಬಾತನ ಮೇಲೆ ಮಹದೇಶ್ವರ ನಗರದ ಐದು ಮಂದಿ ಹಣ ನೀಡುವಂತೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದರು, ಎನ್ನಲಾಗಿದೆ. ಈ ಕುರಿತು ಆತನ ಸಹೋದರ ಪ್ರಜ್ವಲ್ ದೂರು ನೀಡಿದ್ದಾರೆ.
ಫೈನಾನ್ಸ್ ಕಂಪನಿ ನೀಡಿದ್ದ ಸಾಲ ವಸೂಲಿ ಮಾಡಿ ತೆರಳುವಾಗ ಕೋಟೆ ತಿಗಳರ ಬೀದಿಯಲ್ಲಿ ಆರೋಪಿಗಳು ಅಡ್ಡಗಟ್ಟಿ ಹಣದಲ್ಲಿ ಆಗಾಗ ಪಾಲು ನೀಡಬೇಕು, ಇಲ್ಲವಾದರೆ ತೊಂದರೆ ಮಾಡುವುದಾಗಿ ಬೆದರಿಸಿದ್ದಾರೆಂದು ದೂರಿನಲ್ಲಿ ವಿವರಿಸಲಾಗಿದೆ. ಸರ್ಕಲ್ ಇನ್‌ಪೆಕ್ಟರ್ ಮಿಥುನ್‌ಶಿಲ್ಪಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.