ಓದಿಗೆ ತಕ್ಕ ಕೌಶಲ ಕಲಿಯಬೇಕು -ಯುವಜನತೆಗೆ ಪುರುಷೋತ್ತಮ ಬಿಳಿಮಲೆ ಸಲಹೆ

Sudhee_01_Shantiveri_Gopala_Gowda_Award_@_Ka_Sa_Pa (2)
Published on

ಬೆಂಗಳೂರು: ಖಾಸಗಿ ಕಂಪನಿಗಳೇ ಸರ್ಕಾರಗಳನ್ನು ಆಳುವಂತಾಗಿರುವ ಈ ಕಾಲಘಟ್ಟದಲ್ಲಿ, ಮೌಲ್ಯಗಳ ಜತೆಗೆ ಯುವಜನರು ಓದಿಗೆ ಅನುಗುಣವಾಗಿ ಕೌಶಲ ಕಲಿಯುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದ್ದಾರೆ.

ಮೈಕೋ ಕನ್ನಡ ಬಳಗವು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೀದಿಬದಿ ವ್ಯಾಪಾರಿ ಕಾರ್ಮಿಕರ ಸಂಘಟಕಿ ಬಸಮ್ಮ ಅವರಿಗೆ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ರಾಜ್ಯದಲ್ಲಿ ಕನ್ನಡಿಗ ಉದ್ಯೋಗಿಗಳ ಪ್ರಮಾಣ ಕಡಿಮೆಯಾಗುತ್ತಿದೆ. ಕರ್ನಾಟಕದಲ್ಲಿರುವ ಹೊರಗುತ್ತಿಗೆ ಸಂಸ್ಥೆಗಳು ಹೊರ ರಾಜ್ಯದವರನ್ನು ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಕನ್ನಡ ಭಾಷೆ ಮಾತ್ರವಲ್ಲದೆ ಕನ್ನಡಿಗರ ಉಳಿವೂ ಕಷ್ಟವಾಗಿದೆ. ಹಾಗಾಗಿ ಕನ್ನಡಿಗರು ತಮ್ಮ ಭದ್ರತೆಗಾಗಿ ಒಗ್ಗೂಡುವ ಅಗತ್ಯವಿದೆ ಎಂದರು.

ರಾಜ್ಯಕ್ಕೆ ಖಾಸಗಿ ಕಂಪನಿಗಳಿಂದ ಸುಮಾರು 10 ಲಕ್ಷ ಕೋಟಿ ರೂ. ಹೂಡಿಕೆ ಬರುತ್ತಿದೆ. ಇದರಿಂದ ಉದ್ಯೋಗವೂ ಸೃಷ್ಟಿಯಾಗುತ್ತದೆ ಎಂದು ರಾಜಕಾರಣಿಗಳು ಹೇಳುತ್ತಿದ್ದಾರೆ. ಆದರೆ ಆ ಕಂಪನಿಗಳ ಉತ್ಪನ್ನಗಳ ಮಾರಾಟ ಎಲ್ಲಿ ಎಂಬುದನ್ನು ತಿಳಿಯಬೇಕಿದೆ. ಜೊತೆಗೆ ಅವರು ಉತ್ಪಾದಿಸುವ ಉತ್ಪನ್ನ ಮತ್ತು ಅಲ್ಲಿನ ಕೆಲಸಕ್ಕೆ ಬೇಕಾದ ಕೌಶಲ ಆಧಾರಿತ ಶಿಕ್ಷಣ ಕಲಿಸುವ ಅಗತ್ಯವಿದೆ. ಆದರೆ ನಮ್ಮಲ್ಲಿ ಅಂತಹ ತರಬೇತಿ ಸಂಸ್ಥೆಗಳು ಇಲ್ಲ. ಕೋವಿಡ್ ನಂತರ ಬಹಳಷ್ಟು ಮಂದಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರ ಪರಿಣಾಮ ಭಾರತದಲ್ಲಿ ಕೃಷಿ ವಲಯ ಚೇತರಿಕೆ ಕಂಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಎಂ. ಪ್ರಕಾಶಮೂರ್ತಿ, ಮೈಕೋ ಕನ್ನಡ ಬಳಗದ ಅಧ್ಯಕ್ಷ ಕೆ.ಎಸ್. ರಾಮತೀರ್ಥ, ಬಾಷ್ ಬಿಡದಿ ಮಾನವ ಸಂಪನ್ಮೂಲ ವಿಭಾಗದ ಎಸ್. ಶ್ರೀನಾಥ್ ಇತರರು ಇದ್ದರು.

ಬಾಕ್ಸ್:

ಗೋಪಾಲಗೌಡರ ಪ್ರತಿಮೆಗೆ ಆಗ್ರಹ

ಬೆಂಗಳೂರಿನಲ್ಲಿರುವ ಶಾಂತವೇರಿ ಗೋಪಾಲಗೌಡ ವೃತ್ತದ ಬಳಿ ಗೋಪಾಲಗೌಡರ ಪ್ರತಿಮೆ ಸ್ಥಾಪಿಸಬೇಕು ಎಂದು ಮೈಕೋ ಕನ್ನಡ ಬಳಗವು ಸರ್ಕಾರವನ್ನು ಆಗ್ರಹಿಸಿತು. ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರಿಗೆ ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.

ಕೋಟ್:

ಬಾಲ್ಯದಲ್ಲಿ ಓದಿನೊಂದಿಗೆ ಬೀದಿಬದಿ ವ್ಯಾಪಾರ ಮಾಡುತ್ತಿದ್ದೆ. ಆಗ ಪೊಲೀಸರ ದೌರ್ಜನ್ಯ ಮಾಡುತ್ತಿದ್ದರು. ಆದರೆ ಇಂದಿಗೂ ಅಂತಹ ಸಮಸ್ಯೆ ಮುಂದುವರಿದಿದೆ. ಕುಟುಂಬದ ನಿರ್ವಹಣೆಗಾಗಿ ಬೀದಿಯಲ್ಲಿ ವ್ಯಾಪಾರ ಮಾಡುವವರಿಗೆ ಬದುಕಲು ಅವಕಾಶ ಕಲ್ಪಿಸಬೇಕು. ಜತೆಗೆ ಕಾರ್ಮಿಕರ ಈಗಿರುವ ಕೆಲಸದ (8 ಗಂಟೆ) ಅವಧಿ ಹೆಚ್ಚಿಸಬೇಕು ಎನ್ನುವವರ ವಿರುದ್ಧ ಹೋರಾಟ ರೂಪಿಸಬೇಕಿದೆ.

-ಬಸಮ್ಮ, ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಪುರಸ್ಕೃತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net