

ಮಾಗಡಿ : ನಾಡಪ್ರಭು ಕೆಂಪೇಗೌಡ ಕೋಟೆ, ಕಂದಕ, ದೇವಾಲಯ ಉಳಿಸಿಕೊಳ್ಳುವುದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕರ್ತವ್ಯದ ಜತೆಗೆ ನಾಗರಿಕರ ಜವಾಬ್ದಾರಿ ಹೌದು ಎಂದು ಪುರಾತತ್ವ ಇಲಾಖೆ ಬೆಂಗಳೂರು ಉಪವಿಭಾಗ ಉಪನಿರ್ದೇಶಕಿ ಕಾವ್ಯಶ್ರೀ ಹೇಳಿದರು.
ಪಟ್ಟಣದ ನಾಡಪ್ರಭು ಕೆಂಪೇಗೌಡ ಕೋಟೆ ಸ್ಥಳಕ್ಕೆ ಮಂಗಳವಾರ ಕಂದಾಯ ಇಲಾಖೆ, ಪುರಾತತ್ವ ಇಲಾಖೆ ಅಧಿಕಾರಿಗಳು ಜಂಟಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಕೆಂಪೇಗೌಡರು ಕಟ್ಟಿದ ಕೋಟೆ, ಕೊತ್ತಲು, ಕೆರೆ, ಕಲ್ಯಾಣಿ, ದೇವಾಲಯಗಳನ್ನು ಸಂರಕ್ಷಣೆ ಬಗ್ಗೆ ಅಧಿಕಾರಿಗಳನ್ನು ದೂಷಿಸದೇ ಸ್ಥಳೀಯ ಅಧಿಕಾರಿಗಳು, ನಾಗರಿಕರು ಪುರಾತತ್ವ ಇಲಾಖೆ ಜತೆ ಸಹಕಾರ ನೀಡಿದರೆ ಇತಿಹಾಸದ ಮಜಲು ಕಾಪಾಡಿ ಮುಂದಿನ ಪೀಳಿಗೆಗೆ ಬಳುವಳಿ ನೀಡಬಹುದಾಗಿದೆ ಎಂದರು.
ಪಟ್ಟಣದ ಕೆಂಪೇಗೌಡ ಕೋಟೆ, ಕಂದಕದ ಪ್ರದೇಶ 2013ರಲ್ಲೆ 13 ಎಕರೆ 34 ಗುಂಟೆ ಪುರಾತತ್ವ ಇಲಾಖೆ ಅಧೀನಕ್ಕೆ ಒಳಪಟ್ಟಿದೆ. ಕೋಟೆ, ಕಂದಕ ಸುತ್ತಮುತ್ತ ಹಾಗೂ ದೇವಾಲಯ ಸಂಬಂಧಪಟ್ಟ ಪ್ರದೇಶ ಸಾಕಷ್ಟು ಒತ್ತುವರಿಯಾಗಿದೆ ಇದನ್ನು ಉಳಿಸಲಾಗುವುದು. ಸ್ಥಳೀಯರು ಇಲಾಖೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ನಾಡಪ್ರಭು ಕೆಂಪೇಗೌಡ ಕೋಟೆ ಮಾಗಡಿ- ಬೆಂಗಳೂರು ರಸ್ತೆಯ ದಕ್ಷಿಣ ಭಾಗದ ಕಂದಕಕ್ಕೆ ತ್ಯಾಜ್ಯ ಸುರಿಯದಂತೆ ಪುರಸಭೆ ಅಧಿಕಾರಿಗಳ ಜತೆಗೆ ಕಳೆದ 4 ತಿಂಗಳಿಂದ ಪುರಾತತ್ವ ಇಲಾಖೆ ಪತ್ರ ವ್ಯವಹಾರ ಮಾಡಿದೆ. ಆದರೆ, ರಾತ್ರೋ ರಾತ್ರಿ ತ್ಯಾಜ್ಯ ತುಂಬುತ್ತಿದ್ದಾರೆ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಾರೆ. ಆದ್ದರಿಂದ ಪಟ್ಟಣದ ತ್ಯಾಜ್ಯ ವಿಲೇಗೆ ಪುರಸಭೆ ಬೇರೆಡೆ ಜಾಗ ನಿಗದಿಪಡಿಸಿದರೆ ಕಂದಕದ ಬಳಿ ಸ್ವಚ್ಛತೆ ಕಾಪಾಡಲು ಸಾಧ್ಯ ಎಂದರು.
ಸರ್ವೇ ಇಲಾಖೆ, ಪುರಾತತ್ವ ಇಲಾಖೆಯಿಂದ ಮುಂದಿನ ವಾರ ಸರ್ವೇ ನಡೆಸಲಾಗುವುದು, ಪಹಣಿ ಹಾಗೂ ದಾಖಲೆಯಲ್ಲಿರುವ ಕೋಟೆ ಜಾಗವನ್ನು ನಿಗದಿಪಡಿಸಿ ತಂತಿ ಬೇಲಿ ಅಳವಡಿಸಿ ಮುಂದೆ ಈ ಜಾಗ ಯಾವುದೇ ರೀತಿ ಒತ್ತುವರಿಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದರು.
ಕೆಂಪೇಗೌಡ ಕೋಟೆ ಸಂರಕ್ಷಿತ ಸ್ಮಾರಕ ಎಂದು ಘೋಷಣೆಯಾದ ನಂತರ 100 ಮೀಟರ್ ದೂರ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಕೋಟೆಯ ಐತಿಹಾಸಿಕ ಮಹತ್ವದ ಬಗ್ಗೆ ನಾಮಫಲಕ ಅಳವಡಿಸಲಾಗುವುದು. ಕೆಂಪೇಗೌಡ ಜಯಂತಿ, ರಥೋತ್ಸವದ ವೇಳೆ ಕೋಟೆ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಲೈಟ್ ಆ್ಯಂಡ್ ಶೋ ನಡೆಸಲಾಗುವುದು ಎಂದರು.
ಕೆಂಪೇಗೌಡ ಕೋಟೆ ಜೀಣೋದ್ಧಾರಗೊಳಿಸುವ ವಿಚಾರವಾಗಿ ಇಲಾಖೆಯಿಂದ ಯಾವುದೇ ಅನುಮತಿ, ಎನ್‌ಒಸಿ ಪಡೆದಿಲ್ಲ. ಅಭಿವೃದ್ಧಿ ಮಾಡಲಿ. ಆದರೆ, ಕೋಟೆಗೆ ಯಾವುದೆ ತೊಂದರೆಯಾಗಬಾರದು, ಕಂದಕ ಮುಚ್ಚಬಾರದು, ಅಭಿವೃದ್ಧಿ ವೇಳೆ ಪುರಾತತ್ವ ಇಲಾಖೆಯ ಸಂರಕ್ಷಣಾ ಸಹಾಯಕರು ಈ ಬಗ್ಗೆ ಹೆಚ್ಚು ಗಮನ ಹರಿಸಲಿದ್ದಾರೆ ಎಂದರು.