

ಮಾಗಡಿ ; ಆಡಳಿತ ಪಕ್ಷದವರನ್ನು ತಪ್ಪು ಮಾಡಬೇಡಿ ಎಂದು ಎಚ್ಚರಿಸಲೆಂದೇ ಪ್ರತಿ ಪಕ್ಷವಾಗಿ ನಾವಿರುವುದು. ಕಾಂಗ್ರೆಸ್ಸಿಗರು ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ನಾನು ಹೆದರುವುದಿಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ಸವಾಲು ಹಾಕಿದರು.
ಪಟ್ಟಣದ ಜೆಡಿಎಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿನಾಯಕ ದೇವಾಲಯ ಒಡೆಸಲು ಏನು ಕಾರಣ, ಹೊಡೆಸದೆ ಇರಲು ಏನು ಕಾರಣ? ನನ್ನ ಅವಧಿಯಲ್ಲಿ ಏನಾಗಿತ್ತು ಎಂದು ಚರ್ಚೆಗೆ ಕರೆದದ್ದಕ್ಕೆ ದೂರು ಕೊಡಿಸುವುದು, ನನ್ನ ವಿರುದ್ಧ ಸುದ್ದಿಗೋಷ್ಠಿ ಮಾಡಿದರೆ ನಾನು ಹೆದರವುದಿಲ್ಲ ಎಂದರು.
ಧಮ್ಕಿ, ಬೆದರಿಕೆಗೆ ಜಗ್ಗುವುದಿಲ್ಲ. ನಾನು ಭಗವಂತ, ಜನತೆಗೆ ಹೆದರುತ್ತೇನೆ. 17 ವರ್ಷದಿಂದ ಪಾರದರ್ಶಕವಾದ ರಾಜಕಾರಣ ಮಾಡಿದ್ದೇನೆ. ನಾನು ಸರ್ಕಾರಿ ಜಾಗ, ಗೋಮಾಳ, ಕಳ್ಳಬಿಲ್ಲು, ಭ್ರಷ್ಟಾಚಾರ, ಮನೆಹಾಳು ಮಾಡುವ ಕೆಲಸಮಾಡಿಲ್ಲ ಎಂದು ಟಾಂಗ್ ನೀಡಿದರು.
ತಾಲೂಕು ಕಚೇರಿಯಲ್ಲಿ ಹಳೆಯ ದಾಖಲೆ ತಿದ್ದಿ, ಸ್ಕ್ಯಾನ್ ಮಾಡಿ ಲೂಟಿ ನಡೆಯುತ್ತಿದೆ. ದಕ್ಷ ತಹಸೀಲ್ದಾರ್ ನೇಮಿಸದೆ, ಗ್ರೇಡ್ 2 ತಹಸೀಲ್ದಾರ್‌ಗೆ ಚಾರ್ಜ್‌ಕೊಡಿಸಿ, ಕೆಲಸ ಮಾಡಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸರ್ಜನ್ ಇಲ್ಲ, 20 ಬಸ್ ಕೆಟ್ಟುನಿಂತಿವೆ. ಈ ಬಗ್ಗೆ ಪ್ರಶ್ನೆ ಮಾಡಬಾರದಾ?, ಪೊಲೀಸ್ ಠಾಣೆಗೆ ದೂರು ನೀಡಲಿ, ಎಫ್‌ಐಆರ್ ಹಾಕಿಸಲಿ, ಜೈಲಿಗೆ ಕಳುಹಿಸಲಿ ನಾನು ಕ್ಷೇತ್ರದ ಜನತೆಗಾಗಿ ಏನು ಮಾಡಲು ಸಿದ್ಧನಾಗಿದ್ದೇನೆ. ಜನರ ಧ್ವನಿ ಅಡಗಿಸಲು ನಿಮ್ಮಿಂದ ಸಾಧ್ಯವಿಲ್ಲ. ಈ ಬಗ್ಗೆ ಚರ್ಚೆಗೆ ಬರಲಿ ಎಂದು ಆಹ್ವಾನ ನೀಡಿದರು.