

ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರ-ಮಾದಾವರ ವರೆಗಿನ ವಿಸ್ತರಿತ ಮಾರ್ಗದಲ್ಲಿ ಆ.17ರಿಂದ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ಆರಂಭವಾಗಿದೆ. 3.7 ಕಿ.ಮೀ. ವಿಸ್ತರಿತ ಮಾರ್ಗದಲ್ಲಿ ಕನಿಷ್ಠ 5 ಕಿ.ಮೀ ಹಾಗೂ ಗರಿಷ್ಠ 35 ಕಿ.ಮೀ. ವೇಗದಲ್ಲಿ ರೈಲು ಸಂಚಾರ ನಡೆಸಿದೆ.
ಮುಂದಿನ ಹಂತದಲ್ಲಿ ದೆಹಲಿಯಿಂದ ಮೆಟ್ರೋ ರೈಲ್ವೇ ಸುರಕ್ಷತಾ ಆಯೋಗದ ಅಧಿಕಾರಿಗಳು ಆಗಮಿಸಿ ನಿಲ್ದಾಣದಲ್ಲಿ ಸುರಕ್ಷತೆ, ಸಿಗ್ನಲಿಂಗ್, ಟ್ರಾ$್ಯಕ್ ಮುಂತಾದ ವ್ಯವಸ್ಥೆಗಳ ಕುರಿತು ತಪಾಸಣೆ ನಡೆಸಲಿದ್ದಾರೆ. ನಂತರದಲ್ಲಿ ಪ್ರಮಾಣಪತ್ರ ದೊರೆಯುತ್ತಿದ್ದಂತೆ ಅಧಿಕೃತವಾಗಿ ಸಂಚಾರ ಆರಂಭವಾಗಲಿದೆ. ಗಾಂಧಿ ಜಯಂತಿ(ಅ.2)ಯಂದು ವಿಸ್ತರಿತ ಮಾರ್ಗ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಗಸಂದ್ರದಿಂದ ಹಸಿರು ಮಾರ್ಗದ ವಿಸ್ತರಣೆಯ ಕಾಮಗಾರಿ 2017ರಲ್ಲಿ ಆರಂಭಗೊಂಡಿತು. ಬಿಎಂಆರ್ಸಿಎಲ್ ಕಾಮಗಾರಿಯನ್ನು 2019ರಲ್ಲಿ ಪೂರ್ಣಗೊಳಿಸಿ, ವಿಸ್ತರಿತ ಸೇವೆ ಆರಂಭಿಸಲು ಯೋಚಿಸಿತ್ತು. ಆದರೆ ಭೂಮಿ ಸ್ವಾಧಿನ ಪ್ರಕ್ರಿಯೆ ವಿಳಂಬ ಹಾಗೂ ಲಾಕ್ಡೌನ್ ಕಾರಣದಿಂದ ಕಾಮಗಾರಿಗೆ ಹಿನ್ನಡೆಯುಂಟಾಯಿತು. ಈ ಮಾರ್ಗ 298 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ಹಸಿರು ಮಾರ್ಗದಲ್ಲಿ 29 ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸಂಚರಿಸುತ್ತಿದೆ. ವಿಸ್ತರಿತ ಮಾರ್ಗದ ಸೇರ್ಪಡೆಯಿಂದ ನಿಲ್ದಾಣಗಳ ಸಂಖ್ಯೆ 32 ಆಗಲಿದೆ. ಈ ಮಾರ್ಗವು ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗದಲ್ಲಿ ಸಂಚಾರ ಆರಂಭವಾಗುತ್ತಿದ್ದಂತೆ ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಸಂಪರ್ಕಿಸುವ ಬೆಂಗಳೂರಿನ ಮೊದಲ ಮೆಟ್ರೋ ಮಾರ್ಗ ಇದಾಗಿರಲಿದೆ.