

ಬೆಂಗಳೂರು: ಪ್ರಯಾಣಿಕರಿಗೆ ಸುಗಮ ಹಾಗೂ ತಡೆರಹಿತ ಟಿಕೆಟ್ ಬುಕ್ಕಿಂಗ್ ಅನುಭವವನ್ನು ಒದಗಿಸುವ ಉದ್ದೇಶದಿಂದ ನಮ್ಮ ಮೆಟ್ರೋ ಟಿಕೆಟ್ಗಳು ಇದೀಗ 9 ಅಪ್ಲಿಕೇಶನ್ಗಳಲ್ಲಿ "ಕ್ಯೂಆರ್ ಟಿಕೆಟ್' ಲಭ್ಯವಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ತಿಳಿಸಿದೆ.
ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಬಿಎಂಆರ್ಸಿಎಲ್ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್ಡಿಸಿ) ಮೂಲಕ ಕ್ಯೂಆರ್ ಟಿಕೆಟ್ ಸೇವೆ ನೀಡಲು ಪ್ರಾರಂಭಿಸಿದೆ.
ಈಸ್ ಮೈ ಟ್ರಿಪ್, ಹೈವೇ ಡಿಲೈಟ್, ಮೈಲ್ಸ್ ಆ್ಯಂಡ್ ಕಿಲೋಮೀಟರ್ಸ್, ನಮ್ಮ ಯಾತ್ರಿ, ವನ್ ಟಿಕೆಟ್, ರ್ಯಾಪಿಡೋ, ರೆಡ್ಬಸ್, ಟಮ್ಮಾಕ್ ಮತ್ತು ಯಾತ್ರಿ&ಸಿಟಿ ಟ್ರಾವೆಲ್ ಗೈಡ್ ಎಂಬ ಅಪ್ಲಿಕೇಶನ್ಗಳ ಮೂಲಕ ಪ್ರಯಾಣಿಕರು ಕ್ಯೂಆರ್ ಟಿಕೆಟ್ಗಳನ್ನು ಖರೀದಿಸಬಹುದಾಗಿದೆ.
ಈ ಹೊಸ ಆಯ್ಕೆಗಳು ಈಗಾಗಲೇ ಲಭ್ಯವಿರುವ ಟಿಕೆಟ್ ಬುಕ್ಕಿಂಗ್ ಮಾರ್ಗಗಳಾದ ನಮ್ಮ ಮೆಟ್ರೋ ಮೊಬೈಲ್ ಆ್ಯಪ್, ಬಿಎಂಆರ್ಸಿಎಲ್ ವಾಟ್ಸ್ಆಪ್ ಚಾಟ್ ಮತ್ತು ಪೇಟಿಎಂ ಆ್ಯಪ್ಗೆ ಪೂರಕವಾಗಿದ್ದು, ಡಿಜಿಟಲ್ ಬಳಕೆದಾರರಿಗೆ ಇನ್ನಷ್ಟು ಸುಲಭವಾಗಲಿದೆ.
ಡಿಜಿಟಲ್ ಟಿಕೆಟ್ ವ್ಯವಸ್ಥೆಯ ಈ ವಿಸ್ತರಣೆಯು ಮೊದಲ ಹಂತದಿಂದ ಕೊನೆಯ ಹಂತದ ಸಂಪರ್ಕದವರೆಗೆ ಏಕೀಕೃತಗೊಳಿಸುವ ನಮ್ಮ ದೀರ್ಘಕಾಲಿಕ ಪ್ರಯತ್ನದ ಭಾಗವಾಗಿದೆ. ಪ್ರಯಾಣಿಕರು ಇದೀಗ ಒಂದೇ ಅಪ್ಲಿಕೇಶನ್ನಿಂದ ತಮ್ಮ ಮನೆಯಿಂದ ಗಮ್ಯಸ್ಥಳದವರೆಗೆ ತಮ್ಮ ಸಂಪೂರ್ಣ ಪ್ರಯಾಣವನ್ನು ಸುಲಭವಾಗಿ ಯೋಜಿಸಬಹುದಾಗಿದ್ದು, ಇದು ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. > ಎಂ.ಮಹೇಶ್ವರ ರಾವ್, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್ಸಿಎಲ್