

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಆ.10ರಂದು ಚಾಲನೆ ದೊರಕಿದರೂ, ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ ಎಂದು ಯೋಜನೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದೀಗ 3ನೇ ಹಂತದ ಕಾಮಗಾರಿಗಳ ಸಿವಿಲ್ ಟೆಂಡರ್ ಅನ್ನು ವರ್ಷಾಂತ್ಯದೊಳಗೆ ಕರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಸಿದ್ಧತೆ ನಡೆಸುತ್ತಿದೆ.
ಮೂರನೇ ಹಂತದ ವಿಸ್ತರಣೆಯ ಭಾಗವಾದ ಆರೆಂಜ್ ಲೈನ್ನಲ್ಲಿ ಎರಡು ಮಾರ್ಗಗಳಿದ್ದು, ಜೆ.ಪಿ.ನಗರ 4ನೇ ಹಂತದಿಂದ ಕೇಂಪಾಪುರದವರೆಗೆ (32.1 ಕಿ.ಮೀ.) ಹಾಗೂ ಹೊಸಹಳ್ಳಿ&ಕಡಬಗೆರೆಯವರೆಗೆ (12.5 ಕಿ.ಮೀ.) ಒಟ್ಟಾರೆಯಾಗಿ ಇದು 44.6 ಕಿ.ಮೀ. ಉದ್ದದ ಮಾರ್ಗವಾಗಲಿದೆ. ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಒಂದು ವರ್ಷಕ್ಕೂ ಹೆಚ್ಚು ಕಾಲ ಕಳೆದಿರುವ ಈ ಹಂತಕ್ಕೆ ಇದೀಗ ಚುರುಕಿನ ಚಾಲನೆ ಸಿಗುವ ಸಾಧ್ಯತೆ ಇದೆ. ಈ ತಿಂಗಳ ಕೊನೇ ಅಥವಾ ನವೆಂಬರ್ ಮೊದಲ ವಾರದಲ್ಲಿ ಸಿವಿಲ್ ಕಾಮಗಾರಿಗಳ ಟೆಂಡರ್ ಆಹ್ವಾನಿಸಲಿದೆ ಎಂದು ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 8&9 ಟೆಂಡರ್ ಪ್ಯಾಕೇಜ್ಗಳ ಮೂಲಕ ಯೋಜನೆ ಪ್ರಾರಂಭವಾಗುವ ಸಾಧ್ಯತೆ ಇದ್ದು, ಇದರಲ್ಲಿ ನಿಲ್ದಾಣ, ಟ್ರ್ಯಾಕ್ ಹಾಗೂ ಡಿಪೋ ಕಾಮಗಾರಿಗಳು ಒಳಗೊಂಡಿವೆ. ಡಬಲ್ ಡೆಕ್ಕರ್ ನಿರ್ಮಾಣವೂ ಈ ಯೋಜನೆಯ ಭಾಗವಾಗಿರುವುದರಿಂದ ಟೆಂಡರ್ಗಳನ್ನು ಅದರ ಪ್ರಕಾರ ವಿಭಜಿಸಲಾಗುತ್ತದೆ. ಅಂತಿಮ ಟೆಂಡರ್ಗೆ 2&3 ತಿಂಗಳು ಬೇಕು ಎಂದು ತಿಳಿಸಿದ್ದಾರೆ.
ಟೆಂಡರ್ ಪ್ರಕ್ರಿಯೆಯ ವಿಳಂಬಕ್ಕೆ ಮುಖ್ಯ ಕಾರಣ ರಾಜ್ಯ ಸರ್ಕಾರದ ಡಬಲ್ ಡೆಕ್ಕರ್ ಯೋಜನೆಯಾಗಿದೆ. ಸೆಪ್ಟೆಂಬರ್ನಲ್ಲಿ ರಾಜ್ಯ ಸಚಿವ ಸಂಪುಟವು 37.12 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಇದರಲ್ಲಿ 3ನೇ ಹಂತದ ಕಾಮಗಾರಿ ಸೇರಿ ಮುಂದಿನ ಎಲ್ಲ ಮೆಟ್ರೋ ಯೋಜನೆಯೂ ಡೆಬಲ್ ಡೆಕ್ಕರ್ ಮಾದರಿಯಲ್ಲೇ ನಿರ್ಮಾಣವಾಗಲಿದೆ ಎನ್ನಲಾಗುತ್ತಿದೆ.
ಜೈಕಾ ನೆರವು: ಯೋಜನೆಯ ಮುಖ್ಯ ಹಣಕಾಸು ಜಪಾನ್ ಇಂಟರ್ನ್ಯಾಷನಲ್ ಕೋ&ಆಪರೇಶನ್ ಏಜೆನ್ಸಿ (ಜೈಕಾ)ಯಿಂದ ಬರಲಿದೆ. "ಪರಿಸರ ಪರಿಣಾಮ ಮೌಲ್ಯಮಾಪನ ಹಾಗೂ ಸಾಮಾಜಿಕ ಪರಿಣಾಮ ಮೌಲ್ಯಮಾಪನ ವರದಿಗಳನ್ನು ಜೈಕಾ ಅಂತಿಮಗೊಳಿಸಿ ಅಂಗೀಕರಿಸಿದೆ. ಜೈಕಾದಿಂದ ಹಣಕಾಸು ಪಡೆಯುವ ಪ್ಯಾಕೇಜ್ಗಳ ಟೆಂಡರ್ಗಳನ್ನು ಬಿಎಂಆರ್ಸಿಎಲ್ ಡಿಸೆಂಬರ್ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತ ಸರ್ಕಾರ ಮತ್ತು ಜೈಕಾ ನಡುವಿನ ಸಾಲ ಒಪ್ಪಂದಗಳು 2026ರ ಮಾರ್ಚ್ ವೇಳೆಗೆ ಸಹಿಯಾಗುವ ನಿರೀಕ್ಷೆ ಇದೆ. ಹೊಸ ಮಾರ್ಗಗಳಿಗೆ ಅಗತ್ಯವಿರುವ ರೈಲುಗಳ ಖರೀದಿಗೂ ಈ ಸಂಸ್ಥೆಯಿಂದ ಸಹಾಯ ಸಿಗಲಿದೆ.
ಮೆಟ್ರೋದಲ್ಲೂ ಇಲ್ಲ ಜನ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ನಗರಾದ್ಯಂತ ಜನ ಇಲ್ಲದೆ ಬಿಕೋ ಎನ್ನುತ್ತಿತ್ತು. ನಮ್ಮ ಮೆಟ್ರೋದಲ್ಲೂ ರೈಡರ್ಶಿಪ್ ಶೇ,20&30 ಕಡಿಮೆಯಾಗಿದ್ದು, ಮೆಟ್ರೋದಲ್ಲಿ ಪೀಕ್ ಅವರ್ನಲ್ಲೂ ಸಾಮಾನ್ಯ ರಶ್ ಕಂಡು ಬಂದಿಲ್ಲ. ಹಬ್ಬದ ನಿಮಿತ್ತ ಈ ವಾರ ರಜಾ ದಿನ ಇದ್ದುದರಿಂದ ಐಟಿ&ಬಿಟಿ ಉದ್ಯೋಗಿಗಳು, ವಲಸೆ ಕಾರ್ಮಿಕರು ಎಲ್ಲ ತಮ್ಮ ಸ್ವಂತ ಊರುಗಳಿಗೆ ತೆರಳಿದುದರಿಂದ ನಗರಾದ್ಯಂತ ಜನಸಂಖ್ಯೆ ಕಡಿಮೆಯಾಗಿತ್ತು.