ಅಂತಾರಾಜ್ಯ ಮೆಟ್ರೋಗೆ ತಾಂತ್ರಿಕ ತೊಡಕು

metro
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ತಮಿಳುನಾಡು ಸರ್ಕಾರ ಪ್ರಸ್ತಾಪಿಸಿದ್ದ ಬೆಂಗಳೂರು ಮತ್ತು ಹೊಸೂರು ಸಂಪರ್ಕಿಸುವ, ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಮೆಟ್ರೋ ಯೋಜನೆ ತಾಂತ್ರಿಕ ಅಡೆತಡೆ ಎದುರಿಸುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ತಿಳಿಸಿದೆ.

ಕೇಂದ್ರ ಸರ್ಕಾರದ ನಿರ್ದೇಶನದಂತೆ, ಬೆಂಗಳೂರು ಮೆಟ್ರೋ ಜಾಲವನ್ನು 470 ಕಿ.ಮೀ.ವರೆಗೆ ವಿಸ್ತರಿಸುವ ಮಾಸ್ಟರ್​ ಪ್ಲಾನ್​ ಸಿದ್ಧಪಡಿಸುವ ಕಾರ್ಯದಲ್ಲಿ ಬಿಎಂಆರ್​ಸಿಎಲ್​ ತೊಡಗಿದೆ. ಈ ವಿಸ್ತರಣೆಯ ಭಾಗವಾಗಿ ನಾಲ್ಕು ಮೆಟ್ರೋ ವಿಸ್ತರಣೆಗಳ ಕಾರ್ಯಸಾಧ್ಯತಾ ವರದಿಗಳನ್ನು ಸಿದ್ಧಪಡಿಸಿದ್ದು, ಇನ್ನೂ ಮೂರು ವಿಸ್ತರಣೆಗಳು ಮತ್ತು ಒಂದು ಹೊಸ ಮಾರ್ಗದ ಅಧ್ಯಯನ ನಡೆಯುತ್ತಿದೆ. ಬಿಎಂಆರ್​ಸಿಎಲ್​ ರಾಜ್ಯ ಸರ್ಕಾರಕ್ಕೆ ನೀಡಿದ ವರದಿಯ ಪ್ರಕಾರ, ಹೊಸೂರು&ಬೊಮ್ಮಸಂದ್ರ (23 ಕಿ.ಮೀ.) ಮಾರ್ಗವು ವಿಭಿನ್ನ ವಿದ್ಯುತ್​ ಟ್ರ್ಯಾಕ್ಷನ್​ ವ್ಯವಸ್ಥೆಯನ್ನು ಬಳಸುವ ಕಾರಣದಿಂದ ನಮ್ಮ ಮೆಟ್ರೋ ಜಾಲಕ್ಕೆ ತಾಂತ್ರಿಕವಾಗಿ ಸಂಯೋಜನೆ ಸಾಧ್ಯವಿಲ್ಲ.

ಚೆನ್ನೆ$ ಮೆಟ್ರೋ ರೈಲು ನಿಗಮ (ಸಿಎಂಆರ್​ಎಲ್​) ನಡೆಸಿದ ಅಧ್ಯಯನವು ಹೊಸೂರಿನಿಂದ ಬೊಮ್ಮಸಂದ್ರವರೆಗೆ 25 ಕಿ.ಮೀ. ಎಸಿ ಓವರ್​ಹೆಡ್​ ಟ್ರ್ಯಾಕ್ಷನ್​ ವ್ಯವಸ್ಥೆ ಶಿಫಾರಸು ಮಾಡಿತ್ತು. ಆದರೆ ಬಿಎಂಆರ್​ಸಿಎಲ್​ ಬೊಮ್ಮಸಂದ್ರದಿಂದ ಅತ್ತಿಬೆಲೆಯವರೆಗೆ (11 ಕಿಮೀ) ನೈಜ ವಿಸ್ತರಣೆ ಯೋಜನೆಗೆ 750 ವಿಡಿಸಿ ತೃತೀಯ ರೇಲ್​ ಟ್ರ್ಯಾಕ್ಷನ್​ ಬಳಸಲು ಉದ್ದೇಶಿಸಿದೆ. ಬೊಮ್ಮಸಂದ್ರದಿಂದ ಹೊಸೂರುವರೆಗೆ ನಿರಂತರ ಮೆಟ್ರೋ ಮಾರ್ಗ ನಿಮಾರ್ಣ ತಾಂತ್ರಿಕವಾಗಿ ಅಸಾಧ್ಯ. ನಮ್ಮ ಅಭಿಪ್ರಾಯವನ್ನು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದೇವೆ. ಅಂತಿಮ ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದು ಬಿಎಂಆರ್​ಸಿಎಲ್​ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೈಗಾರಿಕಾ ಪಟ್ಟಣ ಅಭಿವೃದ್ಧಿಯ ನಿಟ್ಟಿನಲ್ಲಿ ಒಂದಷ್ಟು ಜನ ಈ ಯೋಜನೆಗೆ ಬೆಂಬಲ ಸೂಚಿಸುತ್ತಿದ್ದರೂ, ಕರ್ನಾಟಕದ ಕೆಲವು ವಲಯಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಈ ಮಾರ್ಗವು ಹೊಸೂರಿಗೆ ಹೆಚ್ಚಿನ ಲಾಭ ನೀಡುತ್ತದೆಯೇ ಹೊರತು ಬೆಂಗಳೂರಿಗೆ ಅಲ್ಲ, ಜತೆಗೆ ನಗರದ ಸಾರಿಗೆ ಒತ್ತಡವನ್ನು ಹೆಚ್ಚಿಸುವ ಆತಂಕವಿದೆ.

ಪ್ರಮುಖ ಯೋಜನೆಗಳು: ಬಿಎಂಆರ್​ಸಿಎಲ್​ ಹಸಿರು ಮಾರ್ಗವನ್ನು ತುಮಕೂರುವರೆಗೆ ವಿಸ್ತರಿಸುವ ಯೋಜನೆಯೂ ಪ್ರಗತಿಯಲ್ಲಿದ್ದು, ಮಾದಾವರದಿಂದ ತುಮಕೂರು (59.6 ಕಿಮೀ)ವರೆಗೆ ವಿಸತ ಕಾರ್ಯ ಸಾಧ್ಯತೆ ವರದಿ ತಯಾರಿಸಲು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಸುಮಾರು 20,896 ಕೂಟಿ ರೂ. ವೆಚ್ಚದಲ್ಲಿ ಈ ಮಾರ್ಗ ನಿರ್ಮಾಣವಾಗಲಿದ್ದು, 25 ನಿಲ್ದಾಣಗಳಿರಲಿವೆ. ಹಸಿರು ಮಾರ್ಗದ ದಕ್ಷಿಣ ವಿಸ್ತರಣೆ ರೇಷ್ಮೆ ಸಂಸ್ಥೆ &ಕನಕಪುರ ರಸ್ತೆಯ ಹಾರೋಹಳ್ಳಿವರೆಗೆ (24 ಕಿಮೀ) 18 ನಿಲ್ದಾಣಗಳೊಂದಿಗೆ ರೂಪಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳು ಮಧ್ಯೆ ಇರುವುದರಿಂದ ನಿಲ್ದಾಣಗಳ ಸಂಖ್ಯೆ ಕಡಿಮೆ ಇರಲಿದೆ. ಮಧ್ಯೆ ನೇರಳೆ ಮಾರ್ಗದ ಪಶ್ಚಿಮ ವಿಸ್ತರಣೆ ಚಲ್ಲಘಟ್ಟದಿಂದ ಬಿಡದಿವರೆಗೆ (15 ಕಿಮೀ) 13 ನಿಲ್ದಾಣಗಳನ್ನು ಒಳಗೊಂಡಿದೆ.

ಮೆಟ್ರೋ ಮಾರ್ಗ ವಿಸ್ತರಣೆ

ನೀಲಿ ಮಾರ್ಗ ದೊಡ್ಡಜಾಲ& ದೇವನಹಳ್ಳಿ 10 ಕಿ.ಮೀ.

ನೇರಳೆ ಮಾರ್ಗ ಕೆ.ಆರ್​.ಪುರ& ಹೊಸಕೋಟೆ 16.3 ಕಿಮೀ

ಸಿಲ್ವರ್​ ಮಾರ್ಗ ಕಡಬಗೆರೆ & ತಾವರೆಕೆರೆ 6 ಕಿಮೀ

ಗುಲಾಬಿ ಮಾರ್ಗ ಕಾಳೇನಅಗ್ರಹಾರ& ಕಾಡುಗೋಡಿ ಟ್ರೀ ಪಾರ್ಕ್​ 68 ಕಿಮೀ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net