

ತುಮಕೂರು: ಮೆಟ್ರೋ ಯೋಜನೆ ವಿಸ್ತರಣೆಗೆ ಬಿಜೆಪಿಯ ಮತ್ತೊಬ್ಬ ಶಾಸಕ ಅಪಸ್ವರ ಎತ್ತಿದ್ದಾರೆ. ಮೆಟ್ರೋ, ಏರ್ಪೋರ್ಟ್ ತರುವುದು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಾಣ ಮಾಡಿದಂತಲ್ಲ ಎಂದು ಬಿಜೆಪಿ ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಕುಟುಕಿದರು.
ಮೆಟ್ರೋ ರೈಲು ಯೋಜನೆಯನ್ನು ತುಮಕೂರಿನವರೆಗೆ ವಿಸ್ತರಣೆ ಮಾಡುವುದಾಗಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಇದೀಗ ಕಾರ್ಯಸಾಧ್ಯತಾ ವರದಿ ಬಂದಿದೆ. ಅಷ್ಟಕ್ಕೆ ಈ ಯೋಜನೆ ಕಾರ್ಯಸಾಧುವಾಗುವುದಿಲ್ಲ. ವರದಿ ಬಂದಾಕ್ಷಣ ಮೆಟ್ರೋರೈಲು ತುಮಕೂರಿಗೆ ಬಂದೇಬಿಟ್ಟಿತು ಎಂದು ಪ್ರಚಾರ ಪಡೆಯಲಾಗುತ್ತಿದೆ. ಮೊದಲು ತುಮಕೂರು ಅಭಿವೃದ್ಧಿ ಆಗಬೇಕು. ಜನಸಂದಣಿ ಹೆಚ್ಚಬೇಕು. 25-30 ಸಾವಿರ ಕೋ.ರೂ., ಬಂಡವಾಳ ಹೂಡುವವರು ಲಾಭನಷ್ಟ ಲೆಕ್ಕಾಚಾರ ಮಾಡುತ್ತಾರೆ. ಪ್ರತಿನಿತ್ಯ ಬೆಂಗಳೂರಿಗೆ ಎಷ್ಟು ಜನ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರೆ ಎಂಬ ಅಂಕಿಅಂಶಗಳನ್ನು ಪಡೆಯುತ್ತಾರೆ. ಎಲ್ಲಾ ಸಾಧ್ಯತೆಗಳ ನಂತರ ಬಂಡಾವಳ ಹೂಡಲು ಆಸಕ್ತಿ ತೋರುತ್ತಾರೆ. ಸಾರಿಗೆ ಬಸ್ ನಿಲ್ದಾಣ ನಿರ್ಮಿಸಿದಷ್ಟು ಸುಲಭವಲ್ಲ ಎಂದರು.
ಇನ್ನೂ ಯೋಜನೆ ಗರ್ಭದಲ್ಲೇ ಇದೆ. ತುಮಕೂರಿಗೆ ಮೆಟ್ರೋ ರೈಲು ನಾನು ಸ್ವಾಗತಿಸುತ್ತೇನೆ. ಇದು ನನ್ನ ಅಭಿಪ್ರಾಯ. ಅದರಂತೆ ಸಂಸದ ತೇಜಸ್ವಿ ಸೂರ್ಯ ಕೂಡ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆಯಿಂದ ಯೋಜನೆ ಮೇಲೆ ಪರಿಣಾಮಬೀರುವುದಿಲ್ಲ. ಅವರೇನು ಪ್ರೈಮ್ ಮಿನಿಸ್ಟರ್, ರೈಲ್ವೆ ಮಿನಿಸ್ಟರ್, ಚೀಫ್ ಮಿನಿಸ್ಟರ್ ಅಲ್ಲ. ಅದನ್ನು ರಾಜ್ಯ, ಕೇಂದ್ರ ಸರ್ಕಾರ ತೀರ್ಮಾನಿಸಬೇಕು. ವರದಿ ಬಂದ ತಕ್ಷಣ ಯೋಜನೆ ಬರುತ್ತೆ ಅಂತಲ್ಲ. ಸೋಮಣ್ಣ ಕೂಡ ಪ್ರಯತ್ನಪಟ್ಟಿರಬಹುದು. ಅದು ಕೇಂದ್ರ ಸಂಪುಟದಲ್ಲಿ ಸಾಧಕಬಾಧಕಗಳ ಚರ್ಚೆ ಆದ ಬಳಿಕ ಅನುಮೋದನೆ ಸಿಗಬೇಕು. ಅದಕ್ಕಿಂತ ಮುಖ್ಯವಾಗಿ ತುಮಕೂರಿನಲ್ಲಿ ಅದಕ್ಕೆ ಪೂರಕವಾದಂತಹ ಅಭಿವೃದ್ಧಿ ಚಟುವಟಿಕೆಗಳ ನಡೆಯಬೇಕು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.