

ಬೆಂಗಳೂರು: ನಮ್ಮ ಮೆಟ್ರೋದ ನೂತನ ಹಳದಿ ಮಾರ್ಗ ಆರ್.ವಿ. ರಸ್ತೆಯಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ವರೆಗೆ ಸಂಪರ್ಕ ಕಲ್ಪಿಸುವ ಮೂಲಕ ಐಟಿ ಸಿಬ್ಬಂದಿಗೆ ಉಪಯುಕ್ತವಾಗಿದ್ದು, ಇಲ್ಲಿನ ಕೆಲವೊಂದು ಮೆಟ್ರೋ ಸ್ಟೇಷನ್ಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲು ವ್ಯವಸ್ಥೆ ಇಲ್ಲದಿರುವುದು ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ.
ಚಲ್ಲಘಟ್ಟದಿಂದ ವೈಟ್ಫೀಲ್ಡ್ವರೆಗೆ ಸಂಪರ್ಕ ಕಲ್ಪಿಸುವ ನೇರಳೆ ಮಾರ್ಗದಲ್ಲಿ ಟಿಕೆಟ್ ಕೊಡಲು ಸಿಬ್ಬಂದಿ ಕೊರತೆ ಇದೆ. ಇದರಿಂದಾಗಿ ಅರ್ಧ ಗಂಟೆ ಸರತಿ ಸಾಲಿನಲ್ಲಿ ನಿಂತು ಕೊಳ್ಳುವ ಪರಿಸ್ಥಿತಿ ಇದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ದಿನದಿನಕ್ಕೆ ಪ್ರಯಾಣಿಕರ ಸಂಖ್ಯೆ ಅಧಿಕವಾಗುತ್ತಿದ್ದು, ಸಮಸ್ಯೆಗಳೂ ಉಲ್ಬಣಿಸುತ್ತಿದೆ.
ಕೆಲ ನಿಲ್ದಾಣಗಳಲ್ಲಿ ಲಿಫ್ಟ್, ಎಸ್ಕಲೇಟರ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ವಿದ್ಯಾರ್ಥಿಗಳು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕಾಲೇಜಿಗೆ ಹೋಗಲು ತಡವಾಗುತ್ತಿದೆ. ಕ್ಲಾಸ್ಗಳು ತಪ್ಪಿಹೋಗುತ್ತಿವೆ. ಬಿಎಂಆರ್ಸಿಎಲ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಪರ್ಯಾಯ ಮಾರ್ಗಗಳನ್ನು ಬಳಸುವುದೊಂದೇ ದಾರಿ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.
18 ನಿಲ್ದಾಣಗಳಲ್ಲಿ ಸಮಸ್ಯೆ
ಹಳದಿ ಮಾರ್ಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿದ್ದು, 11 ನಿಲ್ದಾಣಗಳಲ್ಲಿ ಮಾತ್ರ ಪಾರ್ಕಿಂಗ್ ವ್ಯವಸ್ಥೆ ಇದೆ. ಉಳಿದಂತೆ 5 ನಿಲ್ದಾಣದಲ್ಲಿ ಇಲ್ಲ. ನಗರದಲ್ಲಿ ಒಟ್ಟಾರೆ 83 ಮೆಟ್ರೋ ನಿಲ್ದಾಣಗಳಿದ್ದು, ಅವುಗಳಲ್ಲಿ 18 ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಮೆಟ್ರೋದ ಎಲ್ಲ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಲು ಪ್ರಯಾಣಿಕರು ಬಿಎಂಆರ್ಸಿಎಲ್ಗೆ ಆಗ್ರಹಿಸಿದ್ದಾರೆ.