

ಬೆಂಗಳೂರು: ನಮ್ಮ ಮೆಟ್ರೊ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಆರ್.ವಿ.ರಸ್ತೆಯಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ವರೆಗಿನ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಿಂದ ನೂತನ ಮೆಟ್ರೋ ಫೀಡರ್ ಬಸ್ಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಸಿರು ನಿಶಾನೆ ತೋರಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಪ್ರಯಾಣ ಮಾಡಿದೆ. ಮೆಟ್ರೋ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಹಾಗೂ ವಿಶೇಷವಾಗಿ ಐಟಿ ವಲಯದ ಸಾವಿರಾರು ಪ್ರಯಾಣಿಕರಿಗೆ ಸಹಾಯ ಮಾಡಲಿದೆ. ಹಳದಿ ಮಾರ್ಗಕ್ಕೆ ಇನ್ನಷ್ಟು ರೈಲುಗಳನ್ನು ಸೇರ್ಪಡೆ ಮಾಡುವುದು ಮತ್ತು ಪೀಕ್ ಅವಧಿಯಲ್ಲಿ ರೈಲುಗಳ ಅವಧಿಯನ್ನು 5&10 ನಿಮಿಷಗಳಿಗೆ ಇಳಿಸುವುದು ಪ್ರಯಾಣವನ್ನು ಇನ್ನಷ್ಟು ಸುಗಮ, ವೇಗವಾದ ಹಾಗೂ ಸೌಕರ್ಯಯುತವಾಗಿಸುತ್ತದೆ ಎಂದು ತಿಳಿಸಿದರು.
ಎಲ್ಲೆಲ್ಲ ಸಂಚಾರ?
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಿಎಂಟಿಸಿ ಫೀಡರ್ ಬಸ್ಗಳು ಒಟ್ಟು 4 ಮಾರ್ಗಗಳಲ್ಲಿ 12 ಬಸ್ಸುಗಳಿಂದ 96 ಸುತ್ತುವಳಿಗಳ ಮೆಟ್ರೋ ಫೀಡರ್ ಸೇವೆಗಳನ್ನು ಪ್ರಾರಂಭಿಸಲಾಗಿದೆ. ಸದರಿ ಮಾರ್ಗಗಳಲ್ಲಿ ಹೊಸರೋಡ್, ಬೆರಟೇನಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಇನ್ಫೊಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ, ಹೆಬ್ಬಗೋಡಿ ಹಾಗೂ ಬೊಮ್ಮಸಂದ್ರ ಒಟ್ಟು 6 ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆಗಳ ಸೌಲಭ್ಯವನ್ನು ಪ್ರಾರಂಭಿಸಿದೆ ಎಂದು ಬಿಎಂಟಿಸಿ ತಿಳಿಸಿದೆ.