2026ರ ಸೆಪ್ಟೆರಂಬರ್​ನಲ್ಲಿ ನೀಲಿ ಮಾರ್ಗ ಶುರು

Namma_Metro_Phase_II_Line_Map
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಗರದ ಬಹುನಿರೀತ, ಅತ್ಯಂತ ವೇಗದ (ಗಂಟೆಗೆ 5 ಕಿಮೀ) ಹಾಗೂ ಸೆಂಟ್ರಲ್​ ಸಿಲ್ಕ್​ ಬೋರ್ಡ್​ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ವನ್ನು ಸಂಪರ್ಕಿಸುವ ನೀಲಿ ಮಾರ್ಗದ ಮೊದಲ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು, ಸಿಲ್ಕ್​ ಬೋರ್ಡ್​ನಿಂದ ಕೆ.ಆರ್​.ಪುರಂ ವರೆಗೆ 2026ರ ಸೆಪ್ಟೆರಂಬರ್​ ಒಳಗಾಗಿ ಸಂಚಾರ ಆರಂಭಿಸುವ ನಿರೀೆ ಇದೆ.

ದೇಶದಲ್ಲೇ ಪ್ರಯಾಣಿಕರ ಒತ್ತಡವಿರುವ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಇರುವ ಕೆಐಎ ನಗರದ ಕೇಂದ್ರ ಭಾಗದಿಂದ ಸುಮಾರು 30 ಕಿಮೀ ದೂರದಲ್ಲಿದ್ದು, ಹೆಬ್ಬಾಳ ಇತ್ಯಾದಿ ಸಂಚಾರ ಸಿಕ್ಕಿನ ನಡುವೆ ಸಂಚರಿಸಲು ಅಂದಾಜು ಒಂದು ತಾಸಾದರೂ ಬೇಕು. ಆದ್ದರಿಂದಲೇ ಈ ಮಾರ್ಗದಲ್ಲಿ ಮೆಟ್ರೋ ಸೇವೆಯ ಅಗತ್ಯ ಬಹಳಷ್ಟಿದ್ದು, ಈ ಮಾರ್ಗ ವಿಮಾನಯಾನ ಮಾಡುವವರಿಗೆ ಉಪಯುಕ್ತವಾಗಲಿದೆ. ಈಗಾಗಲೇ ನಗರದಿಂದ ವಿಮಾನ ನಿಲ್ದಾಣಕ್ಕೆ ತೆರಳುವವರು 1&2 ಗಂಟೆ ಮೊದಲೇ ತೆರಳುವುದು ವಾಡಿಕೆಯಾಗಿದೆ. ಏರ್​ಪೋರ್ಟ್​ ರಸ್ತೆಯಲ್ಲಿನ ಸಂಚಾರ ಸಿಕ್ಕಿನ ಸಮಸ್ಯೆಯೇ ಅದಕ್ಕೆ ಮುಖ್​ಉ ಕಾರಣವಾಗಿದ್ದು, ಮೆಟ್ರೋ ಬಂದರೆ ಇಂಥ ಸಮಸ್ಯೆಗೆ ಪರಿಹಾರ ಸಿಗಲಿದೆ.

ಕೆಐಎಯಲ್ಲಿ 3 ವರ್ಷದಲ್ಲಿ ವಿಮಾನದಲ್ಲಿ ಸಂಚರಿಸುವವರ ಸಂಖ್ಯೆ ದುಪ್ಪಟ್ಟು ಆಗಿದ್ದು, 2024&-25ರಲ್ಲಿ ಬರೋಬರಿ 4.2 ಕೋಟಿ ಜನರು ಪ್ರಯಾಣಿಸಿದ್ದಾರೆ. ನಮ್ಮ ಮೆಟ್ರೋ ನೀಲಿ ಮಾರ್ಗ ಪೂರ್ತಿಗೊಂಡರೆ ಶೇ.25ರಷ್ಟು ಜನರು ಮೆಟ್ರೋ ಮೂಲಕವೇ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.

ನೀಲಿ ಮಾರ್ಗವನ್ನು ಎರಡು ಹಂತವಾಗಿ ವಿಂಗಡಿಸಲಾಗಿದ್ದು, ಸೆಂಟ್ರಲ್​ ಸಿಲ್ಕ್​ ಬೋರ್ಡ್​& ಕೆ.ಆರ್​.ಪುರ (ಹಂತ 2ಎ) ಮತ್ತು ಕೆ.ಆರ್​.ಪುರ&ಕೆಐಎ (ಹಂತ 2ಬಿ). 2021ರ ಆಗಸ್ಟ್​ನಲ್ಲಿ ಹಂತ 2ಎ ಕಾಮಗಾರಿ ಆರಂಭವಾಗಿತ್ತು. 2022ರ ಫೆಬ್ರುವರಿಯಲ್ಲಿ ಹಂತ 2ಬಿ ಕಾಮಗಾರಿಯೂ ಶುರುವಾಗಿತ್ತು. ಹಂತ 2ಬಿಯ ಕಾಮಗಾರಿ ಕೆ.ಆರ್​. ಪುರದಿಂದ ಹೆಬ್ಬಾಳವರೆಗೆ ಹೊರವರ್ತುಲ ರಸ್ತೆಯಲ್ಲಿ ಹೆಚ್ಚು ಮೇಲೇತುವೆ ರಸ್ತೆಗಳಿರುವುದರಿಂದ ಕಾಮಗಾರಿ ನಿಧಾನವಾಗಿದ್ದು, ಹಂತ 2ಎ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ವಿಮಾನ ನಿಲ್ದಾಣದಿಂದ ಹೆಬ್ಬಾಳವರೆಗೆ 2027ರ ಜೂನ್​ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಹೆಬ್ಬಾಳದಿಂದ ಕೆ.ಆರ್​.ಪುರ ನಡುವೆ ಅದೇ ವರ್ಷ ಡಿಸೆಂಬರ್​ ಒಳಗೆ ಮೆಟ್ರೋ ಸಂಚಾರ ಆರಂಭಿಸಬೇಕು ಎಂಬ ಗುರಿ ಇಟ್ಟುಕೊಂಡಿದ್ದೇವೆ ಎಂದು ಬಿಎಂಆರ್​ಸಿಎಲ್​ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಬ್ಲೂಲೈನ್​ ವಿವರ

58.15 ಕಿಮೀ ಉದ್ದವಿರುವ ನಮ್ಮ ಮೆಟ್ರೋ ನೀಲಿಮಾರ್ಗದಲ್ಲಿ ಬಹುತೇಕ ಎತ್ತರಿಸಿದ ಮಾರ್ಗಗಳಿರಲಿದ್ದು, ಕೇಂದ್ರ ರೇಷ್ಮೆ ಮಂಡಳಿ, ಎಚ್​ಎಸ್​ಆರ್​ ಬಡಾವಣೆ, ಅಗರ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ, ಕೋಡಿಬೀಸನಹಳ್ಳಿ, ಮಾರತ್​ಹಳ್ಳಿ, ಇಸ್ರೋ, ದೊಡ್ಡನೆಕ್ಕುಂದಿ, ಡಿಆರ್​ಡಿಒ, ಸ್ಪೋರ್ಟ್ಸ್​ ಕಾಂಪ್ಲೆಕ್​, ಸರಸ್ವತಿ ನಗರ, ಕೃಷ್ಣ್ಣರಾಜಪುರ, ಕಸ್ತೂರಿನಗರ, ಹೊರಮಾವು, ಎಚ್​ಆರ್​ಬಿಆರ್​ ಬಡಾವಣೆ, ಕಲ್ಯಾಣ ನಗರ, ಎಚ್​ಬಿಆರ್​ ಬಡಾವಣೆ, ನಾಗವಾರ,ವೀರಣ್ಣಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೇಹಳ್ಳಿ, ಜಕ್ಕೂರು ಕ್ರಾಸ್​, ಯಲಹಂಕ, ಬಾಗಲೂರು ಕ್ರಾಸ್​, ಬೆಟ್ಟಹಲಸೂರು, ದೊಡ್ಡಜಾಲ, ವಿಮಾನ ನಿಲ್ದಾಣ ನಗರ ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಒಟ್ಟು 30 ನಿಲ್ದಾಣಗಳು ಇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net