

ಸುಳ್ಯ: ಪುತ್ತೂರು ವಿದ್ಯುತ್ ಸ್ಥಾವರದಿಂದ ಸುಳ್ಯ ಉಪವಿಭಾಗಕ್ಕೆ ಬರುವ 33 ಕೆ.ವಿ. ಹಳೇ ವಿದ್ಯುತ್ ಲೈನ್ ಸುಸ್ಥಿತಿಯಲ್ಲಿ ಇಡುವಂತೆ ಒತ್ತಾಯಿಸಿ ಸುಳ್ಯ ಬಿಜೆಪಿ ಮಂಡಲ ಸಮಿತಿಯಿಂದ ಸುಳ್ಯ ಮೆಸ್ಕಾಂಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಪುತ್ತೂರು ವಿದ್ಯುತ್ ಸ್ಥಾವರದಿಂದ ಸುಳ್ಯ ಉಪವಿಭಾಗಕ್ಕೆ 33 ಕೆ.ವಿ.ಯ ಹೊಸ ವಿದ್ಯುತ್ ಲೈನ್‌ನಲ್ಲಿ ಪ್ರಸ್ತುತ ವಿದ್ಯುತ್ ಸರಬರಾಜು ಆಗುತ್ತಿದೆ. ಈ ಲೈನ್ ಆರಣ್ಯ ಪ್ರದೇಶದಲ್ಲಿ ಹಾದು ಬರುವುದರಿಂದ ಆಗಾಗ ವಿದ್ಯುತ್ ಪೂರೈಕೆ ವ್ಯತ್ಯಯವಾಗುತ್ತಿದೆ. ಈ ಹಿಂದೆ ಹೊಸ ವಿದ್ಯುತ್ ಲೈನ್ ಎಳೆಯುವ ಸಂದರ್ಭ ಹಳೇ ಲೈನ್ ಸುಸ್ಥಿತಿಯಲ್ಲಿ ಇಡುವುದಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದರೂ, ಲೈನ್ ನಿರ್ವಹಣೆ ಮಾಡಿ ಬದಲಿ ಲೈನ್ ಆಗಿ ಬಳಕೆಯಲ್ಲಿ ಇಟ್ಟಿಲ್ಲ. ಈ ಕೂಡಲೇ ಹಳೇ ವಿದ್ಯುತ್ ಲೈನ್ ಸುಸ್ಥಿತಿಯಲ್ಲಿ ಇಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಕೋಶಾಧಿಕಾರಿ ಸುಬೋಧ್ ಶೆಟ್ಟಿ ಮೇನಾಲ, ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ, ಹೇಮಂತ್ ಕಂದಡ್ಕ, ಚಂದ್ರಶೇಖರ ಕೇರ್ಪಳ ಇದ್ದರು. ಮೆಸ್ಕಾಂ ಇಂಜಿನಿಯರ್ ಸುಪ್ರಿತ್ ಮನವಿ ಸ್ವೀಕರಿಸಿದರು.