ಮಾನವನಲ್ಲಿ ಬೆಳೆಯಲಿ ಸತ್ವಗುಣ : ಚಿತ್ರಾಪುರ ಶ್ರೀ ಆಶಿರ್ವಚನ ಎಡನೀರು ಮಠದಲ್ಲಿ : ಮಹಾಶ್ರೀಚಕ್ರ ನವಾವರಣ ಪೂಜೆ

New Project (1)
Published on

ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ ತಾಂತ್ರಿಕತ್ವದಲ್ಲಿ ಶುಕ್ರವಾರ ಮಹಾ ಶ್ರೀಚಕ್ರ ನವಾವರಣ ಪೂಜೆ ನಡೆಯಿತು.

ಬೆಳಗ್ಗೆ ಶ್ರೀ ನರಸಿಂಹ ಅಡಿಗ ಕೊಲ್ಲೂರು ಅವರಿಂದ ಚಂಡಿಕಾ ಹವನ ನಡೆಯಿತು. ರಾತ್ರಿ ಮಹಾಪೂಜೆಯ ಸಂದರ್ಭದಲ್ಲಿ ಸುಬ್ರಹ್ಮಣ್ಯ ಕಾರಂತ ಪ್ರಸ್ತುತಿಯಲ್ಲಿ ಅಷ್ಟಾವಧಾನ ಸೇವೆ ನಡೆಯಿತು. ಚತುರ್ವೇದ, ಸಂಗೀತ, ಯಕ್ಷಗಾನ, ನಾಟ್ಯ ಸೇವೆಗಳ ನಂತರ ಮಹಾಮಂಗಳಾರತಿ ನಡೆಯಿತು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಾಧನೆ ಮಾಡುವುದರೊಂದಿಗೆ ದೇವರ ಅನುಗ್ರಹವನ್ನು ಸಂಪಾದನೆ ಮಾಡಬೇಕಾದರೆ ಸತ್ವಗುಣದ ಅಭಿವೃದ್ಧಿಯಾಗಬೇಕು. ಅದಕ್ಕಾಗಿ ಜಗನ್ಮಾತೆಯನ್ನು ಶ್ರೀ ರೂಪದಲ್ಲಿ ಆರಾಧನೆ ಮಾಡಬೇಕು. ಕಷ್ಟದಲ್ಲಿರುವವರಿಗೆ ರಕ್ಷಣೆ, ಸಹಕಾರ, ಪರೋಪಕಾರ, ಆಸೆಗಳ ಪೂರೈಕೆ, ಧರ್ಮಾಚರಣೆ ಮೊದಲಾದವು ರಜೋಗುಣದ ಸ್ವಭಾವಗಳಾಗಿವೆ. ಅಜ್ಞಾನ ನಿದ್ರೆ, ಆಲಸ್ಯ, ಭಯಗಳು ತಮೋಗುಣಗಳಾಗಿವೆ. ದುರ್ಗಾದೇವಿಯ ಅನುಗ್ರಹದಿಂದ ತಮೋಗುಣದ ದೋಷಗಳು ನಿವಾರಣೆಯಾಗುತ್ತವೆ. ದೇವಿಯ ಆರಾಧನೆಯಿಂದ ಜೀವನದಲ್ಲಿ ತಿಳಿಯದೆ ಇರುವುದನ್ನು ತಿಳಿಯುವ ಶಕ್ತಿ ಲಭಿಸುತ್ತದೆ ಎಂದರು.

ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಮಾಜಿ ಸಂಸದ ವಿನಯಕುಮಾರ್ ಸೊರಕೆ ಹಾಗೂ ಗಣ್ಯರು ಪಾಲ್ಗೊಂಡು ದೇವರ ಪ್ರಸಾದವನ್ನು ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net