

ಹಾವೇರಿ: ನಗರದಲ್ಲಿ ಸರಕುಗಳ ಲೋಡಿಂಗ್ ಹಾಗೂ ಅನ್ಲೋಡ್ ಸಮಯ ನಿಗದಿಗೆ ವ್ಯಾಪಾರಸ್ಥರು ಪ್ರತ್ಯೇಕ ಸಭೆ ನಡೆಸಿ ಸಮಯ ತಿಳಿಸಿದರೆ ಈ ಕುರಿತು ರ್ಚಚಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕುರಿತು ತಾಪಂ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ವ್ಯಾಪಾರಸ್ಥರು ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಹೊರಡಿಸಿರುವ ಸಂಚಾರ ನಿಯಮ ಪಾಲನೆಯ ಅಧಿಸೂಚನೆಯಂತೆ ನಿಶ್ಯಬ್ದ ವಲಯ, ಏಕಮುಖ ಸಂಚಾರ ಮಾರ್ಗಗಳು, ವಾಹನ ನಿಲುಗಡೆ ಸ್ಥಳ, ಲೋಡಿಂಗ್, ಅನ್ಲೋಡ್ ಸಮಯದ ಬದಲಾವಣೆಗೆ ವ್ಯಾಪಾರಸ್ಥರು, ಸಾರ್ವಜನಿಕರು ಹಲವು ವಿಚಾರಗಳ ಕುರಿತು ಅಧಿಕಾರಿಗಳು, ಶಾಸಕರ ಗಮನ ಸೆಳೆದರು. ಲೋಡಿಂಗ್, ಅನ್ಲೋಡ್ಗೆ ನಿಗದಿಪಡಿಸಿರುವ ಸಮಯದಲ್ಲಿ ವ್ಯಾಪಾರಕ್ಕೆ ತೊಂದರೆಯಾಗುತ್ತದೆ. ಸ್ವಲ್ಪ ಬದಲಾವಣೆಯಾಗಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಶಾಸಕರು, ಈ ಕುರಿತು ಇನ್ನೊಮ್ಮೆ ರ್ಚಚಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಖಾಸಗಿ ವಾಹನಗಳು, ಟ್ಯಾಕ್ಸಿಗಳ ನಿಲುಗಡೆ, ಹಲವು ಸಂಚಾರಿ ದಟ್ಟಣೆ ಸ್ಥಳಗಳಲ್ಲಿ ಸಂಚಾರ ಪೊಲೀಸರ ನೇಮಕ, ಬೀದಿ ಬದಿ ವ್ಯಾಪಾರಸ್ಥರಿಗೆ ಸ್ಥಳ ಗುರುತಿಸುವಿಕೆ, ಕಳ್ಳತನ ತಡೆಯಲು ಸಿಸಿಟಿವಿ ಅಳವಡಿಕೆ, ಇರುವ ಸಿಸಿಟಿವಿಗಳ ದುರಸ್ತಿ ಕುರಿತು ಸಭೆಯಲ್ಲಿ ರ್ಚಚಿಸಲಾಯಿತು.
ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಎಸ್ಪಿ ಕೆ.ಜಿ. ದೇವರಾಜ್, ಡಿಎಸ್ಪಿ ವಿಜಯಕುಮಾರ ಸಂತೋಷ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೇಬಿಹಾಳ, ನಗರಸಭೆ ಉಪಾಧ್ಯಕ್ಷೆ ಜಾಹೀದಾಬಾನು ಜಮಾದಾರ ಮೊದಲಾದವರು ಉಪಸ್ಥಿತರಿದ್ದರು.