ಕೋವಿಡ್ ನಂತರ ಹೆಚ್ಚಿದ ಮಾನಸಿಕ ಸಮಸ್ಯೆ; ನಿಮ್ಹಾನ್ಸ್​ನಿಂದ ಆರು ಮಹಾನಗರಗಳಲ್ಲಿ ಸಮೀಕ್ಷೆ..

Nimhans
Published on

ಬೆಂಗಳೂರು: ಕೋವಿಡ್ ನಂತರದಲ್ಲಿ ಜನರ ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) 2022ರ ಆರಂಭದಲ್ಲಿ ದೇಶಾದ್ಯಂತ 2ನೇ ಹಂತದ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯನ್ನು ನಡೆಸಲು ಮುಂದಾಗಿದೆ. ಇದಕ್ಕಾಗಿ ಆರು ಮಹಾನಗರಗಳನ್ನು ಆಯ್ಕೆ ಮಾಡಿಕೊಂಡಿದೆ.

ನಿಮ್ಹಾನ್ಸ್​ನಲ್ಲಿ ಶುಕ್ರವಾರ ನಡೆದ ನಗರಗಳು ಮತ್ತು ಮಾನಸಿಕ ಆರೋಗ್ಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಮಾತನಾಡಿ, ಬೆಂಗಳೂರು, ಮುಂಬೈ, ಕೋಲ್ಕತ್ತಾ, ಚೆನ್ನೈ, ದೆಹಲಿ ಮತ್ತು ಹೈದರಾಬಾದ್ ಸೇರಿ ಆರು ಮಹಾನರಗಳನ್ನು ಮತ್ತು ಎರಡನೇ ಹಂತದ ನಗರಗಳಾದ ಮೈಸೂರು, ಹುಬ್ಬಳಿ ಮತ್ತು ಧಾರವಾಡ ನಗರಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು. ಫೆಬ್ರವರಿ ತಿಂಗಳಲ್ಲಿ ಆರಂಭವಾಗಲಿರುವ ಸಮೀಕ್ಷೆ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು, ಪ್ರತಿ ನಗರದಲ್ಲಿ 3,600 ಜನರನ್ನು ಸಂದರ್ಶಿಸುವ ಮೂಲಕ 20 ಸಾವಿರ ಜನರನ್ನು ತಲುಪುವ ಗುರಿ ಹೊಂದಲಾಗಿದೆ. ಈ ಸಂಬಂಧ ಸಮೀಕ್ಷೆ ನಡೆಸುವ ಸಿಬ್ಬಂದಿಗೆ ಆನ್​ಲೈನ್ ಮೂಲಕ ಶೀಘ್ರದಲ್ಲೇ ತರಬೇತಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

2015-16ರ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯ 1ನೇ ಹಂತದಲ್ಲಿ ಮಹಾ ನಗರಗಳತ್ತ ಗಮನ ಹರಿಸಲಾಗಿಲ್ಲ. ಕ್ಷಿಪ್ರ ನಗರೀಕರಣದೊಂದಿಗೆ ಮಹಾನಗರಗಳಲ್ಲಿನ ಮಾನಸಿಕ ಆರೋಗ್ಯ ಸಮಸ್ಯೆಗಳು ಗ್ರಾಮೀಣ ಪ್ರದೇಶಗಳಿಗಿಂತ ಭಿನ್ನವಾಗಿದೆ. ಹಾಗಾಗಿ 2ನೇ ಹಂತದ ಸಮೀಕ್ಷೆ ಸಂಪೂರ್ಣ ಮಹಾನಗರಗಳ ಮೇಲೆ ಕೇಂದ್ರೀಕರಿಸುವುದಾಗಿದೆ. | ಡಾ. ಬಿ.ಎಸ್. ಪ್ರದೀಪ್ ಮುಖ್ಯಸ್ಥ ನಿಮ್ಹಾನ್ಸ್​ನ ಎಪಿಡೆಮಿಯಾಲಜಿ ವಿಭಾಗ

ಮಾನಸಿಕ ಚಿಕಿತ್ಸೆಯಲ್ಲಿ ಹೆಚ್ಚಿದ ಅಂತರ: ಸಾಂಕ್ರಾಮಿಕ ರೋಗ ತಜ್ಞ ಹಾಗೂ ನಿಮ್ಹಾನ್ಸ್​ನ ಮಾಜಿ ನಿರ್ದೇಶಕ ಡಾ. ಜಿ. ಗುರುರಾಜ್, ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ ವರದಿಯನ್ನು ಉಲ್ಲೇಖಿಸಿ, ಭಾರತದ ನಗರಗಳಲ್ಲಿ ಚಿಕಿತ್ಸೆಯ ಅಂತರವು 70 ರಿಂದ 90 ಇದೆ. ಗುರುತಿಸಬಹುದಾದ ಮಾನಸಿಕ ಸಮಸ್ಯೆಗಳನ್ನು ಹೊಂದಿರುವವರು ಚಿಕಿತ್ಸೆ ಪಡೆಯುತ್ತಿಲ್ಲ. ಇದು ಚಿಕಿತ್ಸೆಯ ಅಂತರಕ್ಕೆ ಕಾರಣವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net