

ಸಾಮಾಜಿಕ ಮಾಧ್ಯಮ ಬಳಕೆಗೂ ಮಿತಿ ಇರಲಿ
* ಜಿಲ್ಲಾ ನ್ಯಾಯಾಧೀಶೆ ಬಿ.ವಿ.ರೇಣುಕಾ ಸಲಹೆ
ರಾಮನಗರ
ದೇಹದ ಆರೋಗ್ಯ ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಮಾನಸಿಕ ಆರೋಗ್ಯ ಕಾಪಾಡುವತ್ತ ಗಮನಹರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ವಿ.ರೇಣುಕಾ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ‘ವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನೊಳಗೊಂಡ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು,
ಮಾನವರಾದ ನಾವು ಕೆಲವೊಮ್ಮೆ ಸಣ್ಣ ವಿಷಯಗಳನ್ನು ನಿರ್ಲಕ್ಷಿಸುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳಲ್ಲಿ ನಿರಂತರ ಒತ್ತಡ ಅಥವಾ ಆತಂಕ, ನಿದ್ರೆ ಕೊರತೆ, ಕೆಲಸದ ಅತಿಯಾದ ಒತ್ತಡ, ಕೌಟುಂಬಿಕ ಒತ್ತಡ, ಸಾಮಾಜಿಕ ಮಾಧ್ಯಮದಲ್ಲಿನ ನಕಾರಾತ್ಮಕತೆ ಮತ್ತು ಸ್ವಯಂ ಕಾಳಜಿಯ ಕೊರತೆ ಕಂಡುಬಂದರೆ ಅಂತಹ ವ್ಯಕ್ತಿಗಳು ಮಾನಸಿಕ ಮಾನಸಿಕ ಒತ್ತಡಕ್ಕೆ ಒಳಗಾಗಿರುತ್ತಾರೆ. ಇಂತಹ ವ್ಯಕ್ತಿಗಳ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಪ್ರತಿದಿನ 30 ನಿಮಿಷಗಳ ಕಾಲ ಧ್ಯಾಯನ ಅಥವಾ ಯೋಗ ಮಾಡುವುದು,
ಕುಟುಂಬ ಮತ್ತು ಸ್ನೇಹತರೋಡನೆ ಮುಕ್ತವಾಗಿ ಮಾತನಾಡುವುದು, ಪ್ರತಿದಿನ ನಮಗೆ ಎಂದು ಸ್ವಲ್ಪ ಸಮಯವನ್ನು ಇಟ್ಟುಕೊಳ್ಳುವುದು, ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು, ಪೌಷ್ಟಿಕ ಆಹಾರ ಸೇವಿಸುವುದು, ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಮಿತವಾಗಿಸುವುದು ಹಾಗೂ ಮನೋ ವೈದ್ಯರು ಅಥವಾ ಸಲಹೆಗಾರರಿಂದ ಆಪ್ತ ಸಮಾಲೋಚನೆ/ಸಲಹೆ ಪಡೆದುಕೊಳ್ಳುವ ಮೂಲಕ ಮಾನಸಿಕ ಒತ್ತಡದಿಂದ ಮುಕ್ತರಾಗಬಹುದು ಎಂದರು.
ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪಂಚಾಕ್ಷರಿ ಎಂ., ಮಾತನಾಡಿ, ಪೊಲೀಸ್ ಸೇರಿ ವಿವಿಧ‘ ಇಲಾಖೆ ಅಧಿಕಾರಿಗಳು ಹಲವಾರು ಒತ್ತಡಗಳ ನಡುವೆ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಬ್ಬರೂ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡರೆ ಉತ್ತಮವಾಗಿ ಕರ್ತವ್ಯ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕುಮಾರ್, ರಾಮನಗರ ಉಪ ವಿಭಾಗದ ಡಿವೈಎಸ್‌ಪಿ ಶ್ರೀನಿವಾಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ ಪಿ.ಆರ್., ಜಿಲ್ಲಾ ಆಸ್ಪತ್ರೆಯ ಮನೋರೋಗ ತಜ್ಞ ಡಾ.ಶಿವಸ್ವಾಮಿ ಬಿ.ಎಂ., ಮಾನಸಿಕ ಆರೋಗ್ಯ ವಿ‘ಾಗದ ಮನೋರೋಗ ತಜ್ಞ ಡಾ.ಆದರ್ಶ್ ಎ.ಎಂ., ಜಿಲ್ಲಾ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.