ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನ: ಎಚ್‌ಎಲ್‌ಎಲ್-ನಿಮ್ಹಾನ್ಸ್ ನಡುವೆ ಒಪ್ಪಂದ

Nimhans
Published on

ಬೆಂಗಳೂರು: ಸಮಾಜದಲ್ಲಿ ಮಾನಸಿಕ ಆರೋಗ್ಯ ಬಲಪಡಿಸಲು ಭಾರತ ಸರ್ಕಾರದ ಉಪಕ್ರಮ ಹಿಂದೂಸ್ತಾನ್ ಲ್ೈಕೇರ್ ಲಿಮಿಟೆಡ್ (ಎಚ್‌ಎಲ್‌ಎಲ್) ಹಾಗೂ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಒಡಂಬಡಿಕೆ ಮಾಡಿಕೊಂಡಿವೆ. ನಿಮ್ಹಾನ್ಸ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಎಚ್‌ಎಲ್‌ಎಲ್‌ನ ಉಪಾಧ್ಯಕ್ಷ (ಮಾರುಕಟ್ಟೆ) ಡಾ. ಎಸ್.ಎಂ. ಉನ್ನಿಕೃಷ್ಣನ್ ಪರಸ್ಪರ ಒಪ್ಪಂದ ಪತ್ರವನ್ನು ಹಸ್ತಾಂತರಿಸಿಕೊಂಡರು.

ಕಳೆದ ಆರು ದಶಕಗಳಿಂದ ಆರೋಗ್ಯ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತಿರುವ ಎಚ್‌ಎಲ್‌ಎಲ್ ಇದೀಗ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದು, ಈ ಒಪ್ಪಂದದಡಿ ವಿಶೇಷವಾಗಿ ಕಾರ್ಯ ಸ್ಥಳಗಳಲ್ಲಿನ ಮಾನಸಿಕ ಆರೋಗ್ಯ ಮತ್ತು ಸಾಮರ್ಥ್ಯ ನಿರ್ಮಾಣವನ್ನು ಕೇಂದ್ರೀಕರಿಸಲಾಗುತ್ತದೆ. ಭಾರತ ಸೇರಿ ಇತರೆ ದೇಶಗಳಲ್ಲಿ ಅಗ್ಗದ ಹಾಗೂ ಸುಲಭವಾಗಿ ಲಭ್ಯವಾಗುವ ತಂತ್ರಜ್ಞಾನ ಆಧಾರಿತ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುವುದಾಗಿದೆ.

ಮಾನಸಿಕ ಆರೋಗ್ಯ ಜಾಗೃತಿ ಮತ್ತು ಪ್ರಚಾರ ಕಾರ್ಯ ಕೈಗೊಳ್ಳುವುದು, ಆರೋಗ್ಯ ವೃತ್ತಿಪರರಲ್ಲಿ ಸಾಮರ್ಥ್ಯ ನಿರ್ಮಾಣ ಮಾಡುವುದು, ಮಾನಸಿಕ ಆರೋಗ್ಯ ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ಹಾಗೂ ಮಾನಸಿಕ ಆರೋಗ್ಯ ನೀತಿಗಳಿಗೆ ವಕಾಲತ್ತು ವಹಿಸುವುದಾಗಿದೆ. ಇವುಗಳ ಜತೆಗೆ ದೇಶಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುವುದಾಗಿದೆ.

ಎಚ್‌ಎಲ್ಎಲ್‌ನ ವಜ್ರ ಮಹೋತ್ಸವ ವಿಸ್ತರಣೆ ಮತ್ತು ವೈವಿಧ್ಯೀಕರಣ ಪ್ರಯತ್ನಗಳ ಭಾಗವಾಗಿ ಈ ಸಹಯೋಗ ಕೈಗೊಳ್ಳಲಾಗಿದೆ. ದೇಶವ್ಯಾಪಿ ಆರೋಗ್ಯ ಸೇವಾ ಜಾಲವನ್ನು ಹೊಂದಿರುವ ಎಚ್‌ಎಲ್ಎಲ್ ಮಾನಸಿಕ ಆರೋಗ್ಯ ಅಭಿಯಾನಕ್ಕಾಗಿ ತನ್ನ ವ್ಯಾಪ್ತಿಯನ್ನು ಬಳಸಿಕೊಳ್ಳಲಿದೆ. ಜತೆಗೆ ನಿಮ್ಹಾನ್ಸ್ ತನ್ನ ಸಂಶೋಧನೆ, ತರಬೇತಿ ಮತ್ತು ಚಿಕಿತ್ಸಾ ಸೇವೆಗಳ ಪರಿಣಿತಿ ಹಂಚಿಕೊಳ್ಳಲಿದೆ. ಈ ಎರಡೂ ಸಂಸ್ಥೆಗಳು ಸಂಘಟಿತವಾಗಿ ಶಾಶ್ವತ ಮತ್ತು ಉದ್ಯೋಗಿಸ್ನೇಹಿ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ನಿರ್ಮಿಸಲು ಸಜ್ಜಾಗಿವೆ.

ಕಾರ್ಯಕ್ರಮದಲ್ಲಿ ನಿಮ್ಹಾನ್ಸ್‌ನ ಸಮುದಾಯ ಮನೋವಿಜ್ಞಾನ ವಿಭಾಗದ ಪ್ರೊ. ಡಾ. ಸಿ. ನವೀನ್ ಕುಮಾರ್, ಅಮೃತ್ ಕೇಂದ್ರದ ಮುಖ್ಯಸ್ಥೆ ರೀಜಾ ಜೋಸ್, ಎಚ್‌ಎಲ್‌ಎಲ್ ವ್ಯವಸ್ಥಾಪಕ ಜಗದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net