ಕೆಎಂಎಗೆ ಆನ್ಲೈನ್ ಮೂಲಕ ಸದಸ್ಯತ್ವ

ಕೆಎಂಎಗೆ ಆನ್ಲೈನ್ ಮೂಲಕ ಸದಸ್ಯತ್ವ
Published on

ಗೋಣಿಕೊಪ್ಪ: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ)ನ ಸದಸ್ಯತ್ವ ಪಡೆಯುವುದನ್ನು ಸರಳೀಕರಣಗೊಳಿಸುವ ಹಿನ್ನೆಲೆ ಶೀಘ್ರದಲ್ಲೇ ಆನ್ಲೈನ್ ಮೂಲಕ ಸದಸ್ಯತ್ವ ಪಡೆಯಲು ವ್ಯವಸ್ಥೆ ರೂಪಿಸಲಾಗುವುದು. ಜತೆಗೆ ಸಂಸ್ಥೆಯ ಸದಸ್ಯರ ಸಮಗ್ರ ವಿವರಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಈ ಕುರಿತು ರೂಪರೇಷೆಗಳು ಅಂತಿಮಗೊಂಡಿದ್ದು, ಸಿದ್ಧತೆಗಳು ಆರಂಭಿಸಿರುವುದಾಗಿ ಕೆಎಂಎ ಅಧ್ಯಕ್ಷ ದುದ್ದಿಯಂಡ ಎಚ್ ಸೂಫಿ ಹಾಜಿ ತಿಳಿಸಿದರು.

ಈ ಕುರಿತು ಇತ್ತೀಚೆಗೆ ನಡೆದ ವಿಶೇಷ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಸಂಘಟನೆಗಳು ಬಲಿಷ್ಠವಾಗಬೇಕಾದರೆ ಅವುಗಳ ಸದಸ್ಯತ್ವದ ಸಂಖ್ಯೆ ಹೆಚ್ಚಾಗಬೇಕು. ಸದಸ್ಯರ ಸಂಖ್ಯಾಬಲ ಸಂಸ್ಥೆಯ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾರಣದಿಂದಾಗಿ ಕೆಎಂಎ ಸದಸ್ಯತ್ವವನ್ನು ಆನ್ಲೈನ್ ಮೂಲಕ ಪಡೆಯುವ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ವ್ಯವಸ್ಥೆಯಿಂದ ಸಂಸ್ಥೆಯ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಎಂಎ ಆನ್ಲೈನ್ ಸದಸ್ಯತ್ವ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಈ ಹಿಂದಿನಿಂದಲೂ ಸದಸ್ಯರು ಮನವಿ ಮಾಡುತ್ತಿದ್ದರು. ಅಲ್ಲದೆ ವಿದೇಶದಲ್ಲಿ ನೆಲೆಸಿರುವ ಸಮುದಾಯದ ಸಾಕಷ್ಟು ಯುವಕರು ಹಿಂದಿನಿಂದಲೂ ಈ ಬೇಡಿಕೆಯನ್ನು ಮುಂದಿಡುತ್ತಿದ್ದರು. ಇದರಂತೆ ಕಳೆದ ಮಹಾಸಭೆಯಲ್ಲೂ ಚರ್ಚಿಸಿ ಅನುಮೋದನೆ ಪಡೆಯಲಾಗಿದೆ ಎಂದರು.

ಪ್ರತಿವರ್ಷದಂತೆ ಕೆಎಂಎ ಪ್ರತಿಭಾ ಪುರಸ್ಕಾರ ಅಕ್ಟೋಬರ್ ತಿಂಗಳಿನಲ್ಲಿ ವಿರಾಜಪೇಟೆಯಲ್ಲಿ ನಡೆಸಲಾಗುತ್ತದೆ. ಶೀಘ್ರದಲ್ಲೇ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಅಕ್ಕಳತಂಡ ಎಸ್.ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ.ಇಸ್ಮಾಯಿಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net