ಡಾ.ಹೆಗ್ಗಡೆಗೆ ‘ಶ್ರಾವಕೋತ್ತಮ ಚಿಂತಾಮಣಿ’ ಉಪಾಧಿ : ಧರ್ಮಸ್ಥಳಕ್ಕೆ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘದ ಸದಸ್ಯರ ಭೇಟಿ

New Project (14)
Published on

ಬೆಳ್ತಂಗಡಿ: ಮೈಸೂರಿನಲ್ಲಿರುವ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘದ ನೇತೃತ್ವದಲ್ಲಿ 25 ಅರ್ಚಕರು, ಶಾಸ್ತ್ರಿಗಳು ಮತ್ತು ಉಪಾಧ್ಯಾಯರು ಗುರುವಾರ ಧರ್ಮಸ್ಥಳಕ್ಕೆ ಬಂದು ಸಾಮೂಹಿಕವಾಗಿ ಮಂಗಲಾಷ್ಟಕ, ಪಂಚನಮಸ್ಕಾರ ಮಂತ್ರ ಪಠಣ, ಭಕ್ತಾಮರ ಸ್ತೋತ್ರ ಪಠಣ ಮಾಡಿ ಧರ್ಮಸ್ಥಳ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮೇಲಿನ ಷಡ್ಯಂತ್ರ ನಿವಾರಣೆಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಅರ್ಚಕರು ದೇವಸ್ಥಾನ, ಭಗವಾನ್ ಚಂದ್ರನಾಥ ಸ್ವಾಮಿ ಬಸದಿ ಹಾಗೂ ಬಾಹುಬಲಿ ಬೆಟ್ಟದಲ್ಲಿ ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಬೀಡಿನಲ್ಲಿ(ಹೆಗ್ಗಡೆಯವರ ನಿವಾಸ) ನಡೆದ ಸರಳ ಸಮಾರಂಭದಲ್ಲಿ ಅವರವರ ಊರಿನ ಬಸದಿಯಲ್ಲಿ ಪೂಜೆ ಮಾಡಿ ತಂದ ಪ್ರಸಾದವನ್ನು ಹೆಗ್ಗಡೆಯವರಿಗೆ ನೀಡಿದರು. ಮೈಸೂರಿನ ಮೋಹನಕುಮಾರ ಶಾಸ್ತ್ರಿ, ಶಾಂತಿನಾಥ ಉಪಾಧ್ಯಾಯ ಮತ್ತು ಹೇಮಾ ಉಪಾಧ್ಯಾಯ ಮಂಗಲಾಷ್ಟಕ ಹಾಗೂ ಜಿನಗೀತೆಗಳನ್ನು ಹಾಡಿ, ಶಾಂತಿಮಂತ್ರ ಪಠಣ ಮಾಡಿದರು.

ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘದ ವತಿಯಿಂದ ಡಾ.ಹೆಗ್ಗಡೆಯವರಿಗೆ ‘ಶ್ರಾವಕೋತ್ತಮ ಚಿಂತಾಮಣಿ ಉಪಾಧಿ’ ನೀಡಿ ಗೌರವಿಸಲಾಯಿತು. ಬಳಿಕ ಹೇಮಾವತಿ ವೀ.ಹೆಗ್ಗಡೆಯವರನ್ನು ಅಭಿನಂದಿಸಿದರು.

ಡಿ.ಹರ್ಷೇಂದ್ರ ಕುಮಾರ್ ಜೈನ ಅರ್ಚಕರ ಸಂಘದ ಸದಸ್ಯರನ್ನು ಸ್ವಾಗತಿಸಿ, ಧರ್ಮಸ್ಥಳದ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಅರ್ಚಕರ ಸಂಘದ ವತಿಯಿಂದ ಡಿ.ಹರ್ಷೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net