ಮೇಕೆದಾಟು: ಎಚ್ಡಿಡಿ - ಡಿಕೆಶಿ ಏಟು ಎದಿರೇಟು

Mekedatu
ಮೇಕೆದಾಟು ಸಂಗ್ರಹ ಚಿತ್ರ
Published on

ರಾಮನಗರ: ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲಿಸಿ ಕೊಡುವುದಾಗಿ ಮೋದಿ ಅವರಿಗೆ ಮಾತು ಕೊಟ್ಟಿದ್ದೇನೆ. ನಾವು ಗೆದ್ದರೆ ಮೇಕೆದಾಟು ಯೋಜನೆಗೆ ಮೋದಿ ಕೈ ಹಿಡಿದು ಸಹಿ ಹಾಕಿಸುವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭರವಸೆ ನೀಡಿದರು.

ಹಾರೋಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಅಳಿಯ ಡಾ. ಸಿ.ಎನ್. ಮಂಜುನಾಥ್ ಪರ ಮತಯಾಚಿಸಿ ಮಾತನಾಡಿದ ಅವರು, ಮೋದಿ ಅವರು ಸಹ ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಅದಕ್ಕಾಗಿಯೇ ಇಳಿ ವಯಸ್ಸಿನಲ್ಲೂ ರಾಜ್ಯದಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡುತ್ತಿದ್ದೇನೆ. ಹೃದಯ ಶಸ್ತ್ರ ಚಿಕಿತ್ಸೆಯಾದರೂ ವಿಶ್ರಾಂತಿ ಪಡೆಯದೆ ಕುಮಾರಸ್ವಾಮಿ ಅವರು ರಾಜ್ಯ ಸುತ್ತುತ್ತಿದ್ದಾರೆ ಎಂದು ಹೇಳಿದರು.

ದೇವೇಗೌಡರ ಹೇಳಿಕೆಗೆ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೇಕದಾಟು ಯೋಜನೆ ಇಷ್ಟು ದಿನ ಯಾಕಪ್ಪಾ ಮಾಡಿಸಲಿಲ್ಲ? ಯೋಜನೆಗಾಗಿ ನಾವು ಹೋರಾಟ ಮಾಡಿ, ಕೋರ್ಟ್‌ಗೆ ಬೇಕಾದ ದಾಖಲೆಗಳೆಲ್ಲವನ್ನೂ ಸಲ್ಲಿಸಿದ್ದೇವೆ. ಅಲ್ಲಿ ನಮಗೆ ನ್ಯಾಯ ಸಿಕ್ಕಿದ ಬಳಿಕ ಯೋಜನೆಯನ್ನು ನಾವೇ ಮಾಡುತ್ತೇವೆ ಎಂದು ಗೊತ್ತಾದ ಮೇಲೆ ಮೋದಿ ಕೈಲಿ ಸಹಿ ಹಾಕಿಸ್ತೀನಿ ಅಂತೀರಾ. ನಿಮ್ಮ ಯಾವ ಸಹಿಯೂ ಬೇಡ ಎಂದು ತಿರುಗೇಟು ನೀಡಿದರು.

ಮೇಕೆದಾಟು ಯೋಜನೆ ಜಾರಿಗಾಗಿಯೇ ನಾನು ನೀರಾವರಿ ಖಾತೆ ತೆಗೆದುಕೊಂಡಿದ್ದೇನೆ. ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಯಾಕೆ ಮಾಡಲಿಲ್ಲ. ಈಗ ಬಂದಿದ್ದೀರಾ? ನಮ್ಮ ಕಾಲದಲ್ಲೇ ಯೋಜನೆ ಮಾಡುತ್ತೇವೆ. ನೀವ್ಯಾರೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net