

ಕಲಬುರಗಿ: ಮಳಖೇಡದ ಕಾಗಿಣಾ ನದಿ ತೀರದಲ್ಲಿರುವ ಶ್ರೀ ಜಯತೀರ್ಥರ ವೃಂದಾವನ ಆವರಣ (ಉತ್ತರಾದಿ ಮಠ)ದಲ್ಲಿ ಮೂರು ದಿನದ ಶ್ರೀಮನ್ನ್ಯಾಯ ಸುಧಾ ಮಂಗಳೋತ್ಸವಕ್ಕೆ ಗುರುವಾರ ಸಂಭ್ರಮದ ಚಾಲನೆ ಸಿಕ್ಕಿದೆ. ಕರ್ನಾಟಕ ಸೇರಿ ದೇಶದ ವಿವಿಧೆಡೆಯ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ವೃಂದಾವನ ಮತ್ತು ಶ್ರೀ ಸತ್ಯಾತ್ಮತೀರ್ಥರ ದರ್ಶನ ಪಡೆದರು. ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಸತ್ಯಾತ್ಮತೀರ್ಥರು ಕಾಗಿಣಾ ನದಿಯಲ್ಲಿ ಅವಗಾಹನ ಸ್ನಾನ ಪ್ರಾತರಾಹ್ನೀಕ ಮುಗಿಸಿ ಜಯತೀರ್ಥರ ಮೂಲ ವೃಂದಾವನಕ್ಕೆ ನಿರ್ವಲ್ಯ ಅಭಿಷೇಕ ಹಾಗೂ ಪಂಚಾಮೃತ ಅಭಿಷೇಕ ನೆರವೇರಿಸಿದರು. ನಂತರ ಸೀತಾ ಸಮೇತ ಶ್ರೀ ಮೂಲ ರಾಮ ದೇವರ ಪೂಜೆಯನ್ನು ಬಂಗಾರ ಮತ್ತು ವಜ್ರ ಮಂಟಪದಲ್ಲಿ ಮಾಡಿದರು. ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಜಯತೀರ್ಥ ವಿದ್ಯಾಪೀಠದ 20 ವಿದ್ಯಾರ್ಥಿಗಳು ಶ್ರೀಮನ್ನಾ್ಯಯ ಸುಧಾ ಮಂಗಳೋತ್ಸವದಲ್ಲಿದ್ದಾರೆ. ಮೊದಲನೇ ದಿವಸ ನಾಲ್ಕು ಸುಧಾಜ್ಞಾನ ಸಂಪನ್ನ ವಿದ್ಯಾರ್ಥಿಗಳು ಯತಿಗಳ ಸಮ್ಮುಖ ಅರ್ಥಪೂರ್ಣ ವಿಷಯ, ಉಪನ್ಯಾಸ ಮಂಡಿಸಿ ಗಮನ ಸೆಳೆದರು. ಸಂಸ್ಕೃತದಲ್ಲಿ ವಿದ್ವತ್ಪೂರ್ಣ ವಿಚಾರವನ್ನು ತರ್ಕಬದ್ಧವಾಗಿ ಮಂಡಿಸಿದರು. ಕನ್ನಡದಲ್ಲಿ ವಿವರಣಾತ್ಮಕ ಸಾರ ಹೇಳಿದರು. ಶ್ರೀಗಳಿಂದ ಮುದ್ರಾಧಾರಣೆ ಮಾಡಿಕೊಂಡ ಎಡಿಜಿಪಿ ಭಾಸ್ಕರರಾವ್ ಮಾತನಾಡಿ, ಧರ್ಮ, ಸಂಸ್ಕೃತಿ ಉಳಿಸುವ ಕೆಲಸ ಎಲ್ಲರೂ ಸೇರಿ ಮಾಡಬೇಕು. ಸುಧಾ ಮಂಗಳೋತ್ಸವದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ವಿಪ್ರರು ಸೇರಿರುವುದು ಖುಷಿ ತಂದಿದೆ. ನಮ್ಮ ಆಚರಣೆಗಳನ್ನು ಯಾವತ್ತಿಗೂ ಮರೆಯಕೂಡದು. ಇನ್ನೊಬ್ಬರ ಒಳಿತಿಗಾಗಿ ದುಡಿಯುವ ಸಮಾಜ ನಮ್ಮದು ಎಂಬುದು ಹೆಮ್ಮೆಯ ವಿಷಯ ಎಂದರು. ವಿವಿಧೆಡೆಯ ವಿದ್ಯಾಪೀಠಗಳ ವಿದ್ವಾಂಸರು, ಯತಿಗಳು, ಆಚಾರ್ಯರು, ವಿದ್ಯಾರ್ಥಿಗಳು, ದೇಶಾದ್ಯಂತ ಹರಡಿರುವ ಉತ್ತರಾದಿ ಮಠದ ಶಿಷ್ಯರು ಭಾಗವಹಿಸಿದ್ದರು. ಎಲ್ಲರಿಗೂ ಊಟೋಪಹಾರ, ವಸತಿ ಸೇರಿ ಎಲ್ಲ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ರಾತ್ರಿ ನಾಡಿನ ಪ್ರಖ್ಯಾತ ಕಲಾವಿದರಿಂದ ದಾಸವಾಣಿ, ಜಯ ಜಾಗರಣೆ ನಡೆಯಿತು. ವಿದ್ವಾಂಸರ ಪ್ರವಚನ ಕಾಗಿಣಾ ನದಿ ತಟದಲ್ಲಿ ಸಂಸ್ಕೃತದ ಕಹಳೆಯನ್ನೇ ಮೊಳಗಿಸಿತು. ಶನಿವಾರ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.
ಶ್ರೀ ಜಯತೀರ್ಥರು ವೇದಾದಿ ಶಾಸ್ತ್ರಗಳ ನಿಜವಾದ ಮರ್ಮ ತಿಳಿಸಿಕೊಟ್ಟಿದ್ದಾರೆ. ಭಗವಂತ ತನ್ನ ಎಲ್ಲ ರಹಸ್ಯ ತತ್ವಗಳನ್ನು ವೇದ, ಗ್ರಂಥಗಳ ಮೂಲಕ ನಮಗೆ ತಿಳಿಸಿದ್ದಾರೆ. ಆದರೆ ಅವು ಭಗವಂತನ ಸಂಕಲ್ಪ ಇದ್ದವರಿಗೆ ಮಾತ್ರ ಅರ್ಥವಾಗುತ್ತವೆ. ಪ್ರಸ್ತುತ ನಾಸ್ತಿಕ ಕಾಲದಲ್ಲೂ ಮಾಘ ಮಾಸದಲ್ಲಿ ಕುಂಭ ಮೇಳಕ್ಕೆ ಕೋಟಿ ಕೋಟಿ ಜನರು ಸೇರುತ್ತಾರೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಅಂತಹ ದೇವರ ಮಹಿಮೆಯನ್ನು ಪರಿಪೂರ್ಣವಾಗಿ ಅರಿಯವ ಶಕ್ತಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಸಾಧ್ಯ.
| ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಉತ್ತರಾದಿ ಮಠಾಧೀಶರು
ಮಳಖೇಡವೇ ಶ್ರೀ ಜಯತೀರ್ಥರ ಮೂಲ ವೃಂದಾವನದ ಪವಿತ್ರ ಸ್ಥಳ. ಅನೇಕ ಪ್ರಮಾಣ, ಪರಂಪರೆ ಮತ್ತು ಇತಿಹಾಸದ ಪುಟಗಳೇ ಸಾರಿ ಹೇಳುತ್ತಿವೆ. ಈ ಕುರಿತು ಇಲ್ಲಸಲ್ಲದ ಹೇಳಿಕೆ ನೀಡಿ ಹುಯಿಲೆಬ್ಬಿಸುವುದು ಸರಿಯಲ್ಲ. ಇದನ್ನು ಯಾರೂ ಒಪ್ಪಲಾರರು.
| ಪಂಡಿತ ವಿದ್ಯಾಸಿಂಹಾಚಾರ್ಯ ಮಾಹುಲಿ ಮುಂಬಯಿ ಶ್ರೀ ಸತ್ಯದಾನ ವಿದ್ಯಾಪೀಠ ಕುಲಪತಿ
ಶ್ರೀ ಜಯತೀರ್ಥರ ಜೀವನವೇ ಗ್ರಂಥಗಳ ರಚನೆಯಾಗಿದೆ. ಜೀವನವಿಡೀ ಅರಗಿಸಿಕೊಳ್ಳಲಾಗದಷ್ಟು ಗ್ರಂಥಗಳನ್ನು ನೀಡಿದ್ದಾರೆ. ಶ್ರೀಮನ್ನ್ಯಾಯ ಸುಧಾ ಮಂಗಳ ಗ್ರಂಥ ಶ್ರೇಷ್ಠ, ಮೌಲಿಕವಾಗಿದೆ. ದೇವರ ಆರಾಧನೆ ಸ್ವರೂಪ ಈ ಗ್ರಂಥದಲ್ಲಿ ಭಗವಂತನ ಸಂಪೂರ್ಣ ಗುಣಗಳನ್ನು ವರ್ಣಿಸಲಾಗಿದೆ.
| ಶ್ರೀ ವಿದ್ಯಾಧೀಶ ತೀರ್ಥರು ಪಲಿಮಾರು ಮಠ