ಮತಾಂತರ ನಿಷೇಧ ಕಾಯ್ದೆ ಜಾರಿಗೆ ಆಗ್ರಹ: ಸಹೃದಯಿ ಮಠಾಧೀಶರ ಒಕ್ಕೂಟದ ಸಭೆ, 100ಕ್ಕೂ ಅಧಿಕ ಸ್ವಾಮೀಜಿಗಳು ಭಾಗಿ..

Conversion
ಮತಾಂತರ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ವಿಜಯಪುರದ ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದ ಎದುರು ಮಠಾಧೀಶರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ವಿವಿಧ ಶ್ರೀಗಳು, ಸ್ವರೂಪ ಕಾಲಕುಂದ್ರಿ, ಮಲ್ಲಿಕಾರ್ಜುನ ಸತ್ತಿಗೆರಿ, ಸುನೀಲ ಬೈರವಾಡಗಿ, ಮಾಯಕ್ಕ ಚೌಧರಿ ಇತರರಿದ್ದಾರೆ.
Published on

ವಿಜಯಪುರ: ಹೆಚ್ಚುತ್ತಿರುವ ಮತಾಂತರ ಹಾವಳಿ ತಡೆಗಟ್ಟಲು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಮಠಾಧೀಶರ ಒಕ್ಕೂಟ ಆಗ್ರಹಿಸಿದೆ. ಇಲ್ಲಿನ ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸಹೃದಯಿ ಮಠಾಧೀಶರ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿದ 100ಕ್ಕೂ ಅಧಿಕ ಶ್ರೀಗಳು ಕೂಡಲೇ ಕಾಯ್ದೆ ಜಾರಿಗೊಳಿಸಲು ಸರ್ಕಾರಕ್ಕೆ ಆಗ್ರಹಿಸಿದರು. ಸಾನ್ನಿಧ್ಯ ವಹಿಸಿದ್ದ ಕನ್ಹೇರಿ ಅದೃಶ ಕಾಡಸಿದ್ಧೇಶ್ವರ ಶ್ರೀಗಳು ಮಾತನಾಡಿ, ರಾಜ್ಯದಲ್ಲಿ ಜನರ ಬಡತನವನ್ನು ದುರುಪಯೋಗಪಡಿಸಿಕೊಂಡು ಜನರಿಗೆ ಆಮಿಷ ಒಡ್ಡಿ ಮತಾಂತರ ಮಾಡುವ ಕಾರ್ಯ ವ್ಯಾಪಕವಾಗಿ ನಡೆಯುತ್ತಿದೆ ಎಂದು ಹೇಳಿದರು.

ಮಠಾಧೀಶರನ್ನು ಮತಾಂತರಿಸಿ ಮಠಗಳನ್ನೇ ಚರ್ಚ್​ಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಇದನ್ನು ವಿರೋಧಿಸುವ ಅವಶ್ಯಕತೆಯಿದೆ. ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿ ಹಾಗೂ ಹಿಂದು ಧರ್ಮದ ಮೇಲೆ ಆಕ್ರಮಣವಾಗುತ್ತ ಬಂದಿದೆ. ಇಂದು ಕೂಡ ಈ ಕಾರ್ಯ ಮುಂದುವರಿದಿದೆ. ಇದನ್ನು ತಡೆಗಟ್ಟುವ ಅವಶ್ಯಕವಿದೆ. ಅದಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು. ಮೋಸದ ಪ್ರಚಾರದಿಂದಾಗಿ ಅನೇಕರು ಮತಾಂತರಗೊಳ್ಳುತ್ತಿದ್ದು, ಕೆಲವರು ಸ್ವಇಚ್ಛೆಯಿಂದ ಮತಾಂತರಗೊಂಡಿದ್ದಾಗಿ ಸುಳ್ಳು ಹೇಳುತ್ತಿದ್ದಾರೆ. ಇದು ಸಮಾಜದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ. ಇದು ಸಮಾಜದ ಸಾಮರಸ್ಯ ಹಾಳು ಮಾಡುತ್ತಿದೆ ಎಂದರು.ವಿಶ್ವ ಹಿಂದು ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಮಾತನಾಡಿ, ಹಿಂದು ಮಹಿಳೆಯರನ್ನು ಲವ್ ಜಿಹಾದ್ ಮೂಲಕ ಮತಾಂತರ ಮಾಡಿ ಅವರನ್ನು ಮಾರಾಟದ ವಸ್ತುಗಳನ್ನಾಗಿ ಉಪಯೋಗಿಸುತ್ತಿದ್ದಾರೆ. ಹಿಂದು ಮಹಿಳೆಯರು ಇದಕ್ಕೆ ಬಲಿಯಾಗಬಾರದೆಂದು ಕರೆಕೊಟ್ಟರು. ಈಗಾಗಲೆ ಹಲವಾರು ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ನಮ್ಮ ರಾಜ್ಯದಲ್ಲೂ ಮತಾಂತರ ನಿಯಂತ್ರಿಸಲು ಪ್ರಬಲ ಕಾಯ್ದೆ ತಕ್ಷಣ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಪ್ರಾಂತೀಯ ಸಹ ಸಂಘಟನಾ ಕಾರ್ಯದರ್ಶಿ ಮನೋಹರ ಮಾತನಾಡಿ, ಮತಾಂತರಗೊಂಡ ಹಿಂದುಗಳನ್ನು ಘರ್ ವಾಪಸಿ ಮೂಲಕ ಹಿಂದು ಧರ್ಮಕ್ಕೆ ಕರೆತರುವ ಕೆಲಸ ಮಾಡಬೇಕಿದೆ. ಈಗಾಗಲೆ ವಿಶ್ವ ಹಿಂದು ಪರಿಷತ್, ಮಠಾಧೀಶರ ಮೂಲಕ ಅನೇಕರನ್ನು ಹಿಂದು ಧರ್ಮಕ್ಕೆ ಮರಳಿ ತರಲಾಗಿದೆ ಎಂದರು.

ಕಮರಿಮಠದ ಶಿವಾನಂದ ಶ್ರೀ, ಶಿರೋಳದ ಶಂಕರಾರೂಢ ಶ್ರೀ, ಸಿದ್ಧಾರೂಢ ಮಠದ ಚಿನ್ಮಯಾನಂದ ಶ್ರೀ, ಕೆಸರಟ್ಟಿಯ ಸೋಮಲಿಂಗ ಶ್ರೀ, ಮುಖಂಡರಾದ ಸ್ವರೂಪ ಕಾಲಕುಂದ್ರಿ, ಮಲ್ಲಿಕಾರ್ಜುನ ಸತ್ತಿಗೆರಿ, ಸುನೀಲ ಬೈರವಾಡಗಿ, ಮಾಯಕ್ಕ ಚೌಧರಿ, ಸಂಗನಗೌಡ ಪಾಟೀಲ, ಅವಿನಾಶ ಬಡಿಗೇರ, ಸುನೀಲ ಜಮಖಂಡಿ, ಸಿದ್ದಣ್ಣ ಹೂಗಾರ, ಜೈ ಪ್ರಕಾಶ ಅಂಬಲಿ, ಭೀಮನಗೌಡ ಬಿರಾದಾರ, ಶಂಕರಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net