ಪಶು ಆಸ್ಪತ್ರೆಗಳಲ್ಲಿ ಔಷಧ ಕೊರತೆ : ಕಾಸರಗೋಡು ಜಿಲ್ಲೆಯಲ್ಲಿ ಹೈನುಗಾರರು ಹೈರಾಣ : ಅನುದಾನ ಸಮಸ್ಯೆ ಶಂಕೆ

New Project (10)
Published on

ಪುರುಷೋತ್ತಮ ಪೆರ್ಲ ಕಾಸರಗೋಡು

ಸರ್ಕಾರಿ ಪಶು ಆಸ್ಪತ್ರೆಗಳಲ್ಲಿ ಅಗತ್ಯ ಔಷಧ ಲಭ್ಯವಾಗದೆ ಕೃಷಿಕರು ಸಂಕಷ್ಟ ಅನುಭವಿಸುವಂತಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ 42 ಪಶು ಆಸ್ಪತ್ರೆಗಳಿದ್ದು, ಇವುಗಳಲ್ಲಿ ಬಹುತೇಕ ಆಸ್ಪತ್ರೆ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಜಿಲ್ಲೆಯ ಎಣ್ಮಕಜೆ, ಬೆಳ್ಳೂರು, ಪೈವಳಿಕೆ ಸಹಿತ ವಿವಿಧ ಪಂಚಾಯಿತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರರಿದ್ದು, ಇವುಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಜಾನುವಾರುಗಳಿಗೆ ಸಂಬಂಧಿಸಿದ ಔಷಧ ಲಭ್ಯವಾಗುತ್ತಿಲ್ಲ ಎಂಬ ದೂರು ಕೃಷಿಕರಿಂದ ಕೇಳಿ ಬರುತ್ತಿದೆ.

ಮೇವಿನ ಕೊರತೆ ಹಾಗೂ ಸಾಕಾಣಿಕೆ ವೆಚ್ಚ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಬಹುತೇಕ ಮಂದಿ ಕೃಷಿಕರು ಜಾನುವಾರು ಸಾಕಣೆ ಕೈಬಿಡುತ್ತಿದ್ದಾರೆ. ಪ್ರತಿದಿನ ಎರಡು ಹೊತ್ತು ಹಾಲು ಕರೆದು, ಹಲವು ಲೀಟರ್ ಹಾಲು ಡಿಪೋಗಳಿಗೆ ಪೂರೈಸುತ್ತಿದ್ದವರು, ಇಂದು ಹೈನುಗಾರಿಕೆ ಕೈಬಿಟ್ಟು ಮನೆ ಖರ್ಚಿಗೆ ಡಿಪೋಗಳಿಂದ ಹಾಲು ತರುವ ಸ್ಥಿತಿ ನಿರ್ಮಾಣವಾಗಿದೆ. ಹೈನುಗಾರರಿಗೆ ನಿರೀಕ್ಷಿತ ರೀತಿಯಲ್ಲಿ ಸರ್ಕಾರದ ಕಡೆಯಿಂದ ಬೆಂಬಲ ಲಭಿಸುತ್ತಿಲ್ಲ. ಇದಕ್ಕೆ ಪೂರಕವೆಂಬಂತೆ ಪಶು ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಒಂದೆಡೆಯಾದರೆ, ಇನ್ನು ಕೆಲವೆಡೆ ಸಿಬ್ಬಂದಿ ಕೊರತೆ ಕಾಡುತ್ತಿದೆ.

ಕೃಷಿವಲಯದ ಅಭಿವೃದ್ಧಿಯಲ್ಲಿ ಹೈನುಗಾರಿಕೆ ಮಹತ್ವದ ಪಾತ್ರ ವಹಿಸುತ್ತಿದ್ದರೂ, ಹೈನು ಉದ್ದಿಮೆಯಲ್ಲಿ ತೊಡಗಿಸಿಕೊಂಡವರಿಗೆ ಅಗತ್ಯ ಪ್ರೋತ್ಸಾಹದ ಕೊರತೆ ಎದುರಾಗುತ್ತಿರುವ ಬಗ್ಗೆ ವ್ಯಾಪಕ ದೂರು ಕೇಳಿ ಬರುತ್ತಿದೆ. ಸರ್ಕಾರಿ ವೆಟರ್ನರಿ ಆಸ್ಪತ್ರೆಗಳಲ್ಲಿ ಅಗತ್ಯ ಸೇವೆ ಸಕಾಲಕ್ಕೆ ಲಭ್ಯವಾಗದ ಹಿನ್ನೆಲೆಯಲ್ಲಿ ಬಹುತೇಕ ಮಂದಿ ಕೃಷಿಕರು ಖಾಸಗಿ ವೈದ್ಯರ ಮೊರೆಹೋಗಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಇದು ಸಣ್ಣ ಕೃಷಿಕರಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸುತ್ತಿದೆ. ಇನ್ನು ಸರ್ಕಾರಿ ವೆಟರ್ನರಿ ಆಸ್ಪತ್ರೆಗಳಿಗೆ ತೆರಳಿದರೂ, ಔಷಧ ಲಭ್ಯವಿಲ್ಲದೆ, ಹೊರಗಿಂದ ಖರೀದಿಗೆ ಚೀಟಿ ಕೊಡಲಾಗುತ್ತಿದೆ ಎಂದು ಹಲವು ಕೃಷಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೆಲವೊಂದು ಔಷಧ ಪರಿಣಾಮಕಾರಿಯಾಗುತ್ತಿಲ್ಲ ಎಂಬ ಕಾರಣದಿಂದ ಅದನ್ನು ಬದಲಾಯಿಸಬೇಕಾಗುತ್ತಿರುವುದರಿಂದ ಲಭ್ಯವಾಗಲು ಒಂದಷ್ಟು ವಿಳಂಬವುಂಟಾಗುತ್ತಿದೆ ಎನ್ನಲಾಗಿದೆ.

ಸಮುದಾಯ ಕೇಂದ್ರಗಳಲ್ಲೂ ಇದೇ ಗೋಳು!

ಇಂದು ಸರ್ಕಾರಿ ವೆಟರ್ನರಿ ಆಸ್ಪತ್ರೆ ಮಾತ್ರವಲ್ಲ ಸಮುದಾಯ ಆಸ್ಪತ್ರೆಗಳಲ್ಲೂ ಇದೇ ಸ್ಥಿತಿಯಿದೆ. ವೈದ್ಯರು ಬರೆದು ಕೊಡುವ ಚೀಟಿಯಲ್ಲಿ ಬಹುತೇಕ ಔಷಧಗಳು ಲಭ್ಯವಾಗದೆ ಮೆಡಿಕಲ್‌ಗಳಿಂದ ದುಬಾರಿ ಹಣ ತೆತ್ತು ಖರೀದಿಸಬೇಕಾಗುತ್ತದೆ. ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲೂ ಕೆಲವೊಂದು ಔಷಧಕ್ಕಾಗಿ ಹಣತೆತ್ತು ಮೆಡಿಕಲ್‌ಗಳನ್ನು ಆಶ್ರಯಿಸಬೇಕಾಗುತ್ತಿದೆ. ಜನತೆ ಹಾಗೂ ಸಾಕುಪ್ರಾಣಿಗಳ ಆರೋಗ್ಯದ ಬಗ್ಗೆಯೂ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ.

ಎಲ್ಲ ಪಂಚಾಯಿತಿಗಳಲ್ಲೂ ಒಂದು ಅಥವಾ ಅದಕ್ಕಿಂತ ಹೆಚ್ಚು ವೆಟರ್ನರಿ ಕೇಂದ್ರಗಳಿವೆ. ಆಯಾ ಪಂಚಾಯಿತಿಗಳು ಔಷಧ ಖರೀದಿ ಸಹಿತ ನಿರ್ವಹಣೆಗೆ ಬೇಕಾದ ಮೊತ್ತ ಮೀಸಲಿರಿಸುತ್ತವೆ. ಇಲಾಖೆಯ ಪೂರೈಕೆ ಹೊರತಾಗಿ ಬಾಕಿ ಔಷಧ ಆಯಾ ಪಂಚಾಯಿತಿಗಳ ಅನುದಾನದಿಂದ ಖರೀದಿಸಬೇಕಾಗುತ್ತದೆ. ಕೆಲವೊಮ್ಮೆ ಅನುದಾನ ವಿಳಂಬವಾದಲ್ಲಿ ಸಮಸ್ಯೆ ತಲೆದೋರುತ್ತದೆ. ಔಷಧ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಡಾ.ಪಿ.ಕೆ.ಮನೋಜ್ ಕುಮಾರ್ ಜಿಲ್ಲಾ ವೈದ್ಯಾಧಿಕಾರಿ ಪಶುಸಂಗೋಪನಾ ಇಲಾಖೆ, ಕಾಸರಗೋಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net