ಮೆಡಿಕಲ್ ಕಾಲೇಜ್ ನಿರ್ವಣಕ್ಕೆ ಸಿಎಂ ಚಾಲನೆ

13-hvr-07
Published on

ಹಾವೇರಿ: ಉತ್ತಮ ವೈದ್ಯಕೀಯ ಸೌಲಭ್ಯಕ್ಕಾಗಿ ಜಿಲ್ಲೆಯ ಜನತೆ ಇನ್ಮುಂದೆ ಹುಬ್ಬಳ್ಳಿ, ದಾವಣಗೆರೆಗೆ ಹೋಗಬೇಕಿಲ್ಲ. ಉತ್ತಮ ಸೌಲಭ್ಯಗಳೊಂದಿಗೆ ಸುಸಜ್ಜಿತ ಸರ್ಕಾರಿ ವೈದ್ಯಕೀಯ ಕಾಲೇಜ್ ನಿರ್ವಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದ ತಾಲೂಕಿನ ದೇವಗಿರಿ-ಯಲ್ಲಾಪುರ ಗ್ರಾಮದ ಬಳಿಯ ಕಾಲೇಜ್ ನಿರ್ವಣದ ಜಾಗದಲ್ಲಿ ಆಯೋಜಿಸಿದ್ದ ನೇರ ಪ್ರಸಾರದಲ್ಲಿ ಮೆಡಿಕಲ್ ಕಾಲೇಜ್ ಕಟ್ಟಡ ನಿರ್ಮಾಣ ಶಂಕುಸ್ಥಾಪನೆ ಸಮಾರಂಭಕ್ಕೆ ಶುಕ್ರವಾರ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಸಿ.ಎಂ. ಉದಾಸಿ ಅವರ ಪರಿಶ್ರಮದಿಂದ ನೂತನ ವೈದ್ಯಕೀಯ ಕಾಲೇಜ್ ಮಂಜೂರಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜ್ ಆರಂಭದಿಂದ ಜಿಲ್ಲೆಯಲ್ಲಿ ಉನ್ನತ ವೈದ್ಯಕೀಯ ಸೌಲಭ್ಯಗಳ ಜೊತೆಗೆ 890 ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ಸೇವೆ ಜಿಲ್ಲೆಗೆ ದೊರಕಲಿದೆ. ಅತ್ಯುನ್ನತವಾದ ವೈದ್ಯಕೀಯ ಸೇವೆಗಳ ಲಭ್ಯತೆಯ ಜೊತೆಗೆ ಜಿಲ್ಲೆಯ ಆರ್ಥಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.

ವೈದ್ಯಕೀಯ ಕಾಲೇಜ್​ಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ತುಂಗಭದ್ರಾ ನದಿಯಿಂದ ನೀರು ಪೂರೈಸಲು 40 ಕೋಟಿ ವೆಚ್ಚದಲ್ಲಿ 24*7 ನಿರಂತರ ಕುಡಿಯುವ ನೀರಿನ ಪೂರೈಕೆ ಯೋಜನೆಯನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಘೊಷಿಸಿದಂತೆ ಜಿಲ್ಲೆಯ 20 ಹಾಸಿಗೆಯ ಆಯುಷ್ ಆಸ್ಪತ್ರೆ ಸ್ಥಾಪನೆಗೆ 5 ಕೋಟಿ ರೂ. ಮೀಸಲಿರಿಸಲಾಗಿದೆ. ಈಗಾಗಲೇ ಕರ್ಜಗಿಯ ನೆಲೋಗಲ್ ಗ್ರಾಮದ ಬಳಿ 9 ಎಕರೆ ಜಮೀನು ಒದಗಿಸಲಾಗಿದೆ ಎಂದರು.

ಉದ್ಘಾಟನೆ ಸಮಯಕ್ಕೆ ಕೈಕೊಟ್ಟ ನೇರ ಪ್ರಸಾರ: ಮುಖ್ಯಮಂತ್ರಿಗಳು ಗೃಹ ಕಚೇರಿಯಿಂದ ನೇರಪ್ರಸಾರದ ಮೂಲಕ ಶಂಕುಸ್ಥಾಪನಾ ಸಮಾರಂಭದ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇನ್ನೇನು ಸಿಎಂ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲು ಸಿದ್ಧರಾಗಿದ್ದರು. ಇಲ್ಲಿನ ವೇದಿಕೆಯಲ್ಲಿನ ಸಚಿವರು ಜ್ಯೋತಿ ಬೆಳಗಿಸಲು ಸಿದ್ಧರಾಗಿದ್ದರು. ಈ ಸಮಯದಲ್ಲಿ ನೇರ ಪ್ರಸಾರ ಕೈಕೊಟ್ಟಿತು. ಸಿಎಂ ಚಾಲನೆ ನೀಡುವ ದೃಶ್ಯಗಳು ಇಲ್ಲಿ ಪ್ರಸಾರವಾಗಲಿಲ್ಲ. ತಾಂತ್ರಿಕ ಸಮಸ್ಯೆ ಸರಿಪಡಿಸಿದ ನಂತರ ಸಿಎಂ ಭಾಷಣ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net