

ತುಮಕೂರು: ಪೆನ್ನು, ಪೇಪರ್ ಹಿಡ್ಕೊಂಡವರೆಲ್ಲಾ ಪತ್ರಕರ್ತರಾಗಲಿಕ್ಕೆ ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರಲ್ಲಿ ಅಧ್ಯಯನಶೀಲತೆ ಮತ್ತು ಗ್ರಹಿಕೆಯ ಕೊರತೆ ಕಾಣುತ್ತಿರುವುದು ಬೇಸರದ ಸಂಗತಿ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ವಿವಿಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಆಯೋಜಿಸಿರುವ 2 ದಿನಗಳ ಮಾಧ್ಯಮ ಹಬ್ಬ "ಇಂಪ್ರೆಷನ್ -2025'ಗೆ ಚಾಲನೆ ನೀಡಿ ಮಾತನಾಡಿದ ಅವರು, ಮಗು ಮಾತಾಡುವ ಮೊದಲು ನೋಡಿ ಕಲಿಯುತ್ತದೆ, ನೋಟದ ಮೂಲಕವೇ ತನ್ನ ಸುತ್ತಮುತ್ತಲ ನಡೆಯುವುದನ್ನು ಗ್ರಹಿಸುತ್ತದೆ. ಸಮಾಜದ ಬಗ್ಗೆ ಸ್ಪಷ್ಟ ನೋಟ- ಗ್ರಹಿಕೆ ಇದ್ದಾಗ ಪರಿಣಾಮಕಾರಿ ಪತ್ರಕರ್ತ ಹುಟ್ಟುತ್ತಾನೆ ಎಂದರು.
ಪತ್ರಕರ್ತರಾಗುವವರಿಗೆ ಮಗುವಿನ ಮನಸ್ಸು ಮುಖ್ಯ. ಪ್ರತಿಯೊಂದು ಮಗುವು ಮಾತನಾಡುವ ಮೊದಲು ನೋಟದ ಮೂಲಕವೇ ತಿಳಿಯುತ್ತದೆ, ಅರಿಯುತ್ತದೆ, ಗ್ರಹಿಸುತ್ತದೆ. ಹಾಗಾಗಿ ನೋಟದ ಮೂಲಕ ಕಲಿಯುವುದು ಸಹಜವಾದ, ನೈಸರ್ಗಿಕವಾದ ಪ್ರಕ್ರಿಯೆ. ಪೂರ್ವಗ್ರಹ ಮುಕ್ತ ಮಗುವಿನ ಮನಸ್ಸಿನಿಂದ ಸಾಮಾಜಿಕ ವ್ಯವಸ್ಥೆ, ತಾರತಮ್ಯಗಳನ್ನು ಇರುವುದನ್ನು ಇರುವ ಹಾಗೆ ಪತ್ರಕರ್ತರು ಗಮನಿಸಬೇಕು. ಅಂದಾಗ ಮಾತ್ರ ಸಾಮಾಜಿಕ ಸಮಸ್ಯೆಗಳು ಮತ್ತು ಈ ಸಮಸ್ಯೆಗಳಿಗೆ ಕಾರಣವಾದ ಸಂಗತಿಗಳ ಬಗ್ಗೆ ಸ್ಪಷ್ಟ ಗ್ರಹಿಕೆ ಬರುತ್ತದೆ. ಈ ಸ್ಪಷ್ಟತೆಯೇ ಜವಾಬ್ದಾರಿಯುತ ಪತ್ರಕರ್ತನನ್ನು ರೂಪಿಸಲಿದೆ ಎಂದು ತಿಳಿಸಿದರು.
ಮಾಧ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನದ ಕಾರಣಕ್ಕೆ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಮುದ್ರಣ ಮಾಧ್ಯಮದಿಂದ ಡಿಜಿಟಲ್ ಮಾಧ್ಯಮವನ್ನು ದಾಟಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಡೆಗೆ ಹೆಜ್ಜೆಯಿಡುತ್ತಿದ್ದೇವೆ. ಈ ಬದಲಾವಣೆಯು ಮಾಹಿತಿ ಹರಿವಿನ ವೇಗವನ್ನು ಹೆಚ್ಚಿಸಿದೆ, ಆದರೆ ಅದೇ ವೇಳೆ ಸುಳ್ಳು ಸುದ್ದಿ, ದ್ವೇಷ, ಭಾಷೆಇತ್ಯಾದಿಗಳ ಹೊಸ ಹೊಸ ಸವಾಲುಗಳನ್ನು, ಅಪಾಯಗಳನ್ನು ಮನುಷ್ಯ ಜಗತ್ತಿನ ಮುಂದಿಟ್ಟಿದೆ. ಇಂತಹ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಮಾಧ್ಯಮ ಶಿಕ್ಷಣವು ನೈತಿಕತೆ ಮತ್ತು ಜವಾಬ್ದಾರಿಯನ್ನು ಕಲಿಸಬೇಕಾಗಿದೆ ಎಂದರು.
ಪ್ರಶ್ನೆ ಮಾಡುವುದು ನಮ್ಮ ಕರ್ತವ್ಯ. ಶಕ್ತಿ ಕೂಡ. ಆದರೆ, ಅದಕ್ಕೆ ಮೊದಲು ಆ ವಿಷಯದ ಬಗ್ಗೆ ಅಧ್ಯಯನ ನಡೆಸಿರಬೇಕು ಎಂದು ಕರ್ನಾಟ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಹೇಳಿದರು.
ಸುಳ್ಳು ಸುದ್ದಿಗಳ ಅಬ್ಬರದಲ್ಲಿ ಮಾಧ್ಯಮ ಸಂಕಷ್ಟದಲ್ಲಿ ಸಿಲುಕಿದೆ. ಜಿಲ್ಲಾಮಟ್ಟ, ಗ್ರಾಮೀಣ ಪತ್ರಕರ್ತರಿಗೆ ಜನರ ಧ್ವನಿಯಾಗಲು ಸಾಕಷ್ಟು ಅವಕಾಶಗಳಿವೆ. ತನಿಖೆ, ರಾಜಕೀಯ ವರದಿಗಿಂತ ಜನರ ಸಮಸ್ಯೆಗಳನ್ನು ಬಿಂಬಿಸುವ ಮೂಲಕ ಅವರ ಪರ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.
ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಮಾಧ್ಯಮ ಶಿಕ್ಷಣವನ್ನು ಜನಪ್ರಿಯಗೊಳಿಸಲು ಮತ್ತು ಮಾಧ್ಯಮ ಅಧ್ಯಯನದತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಕಾಲಕ್ಕೆ ತಕ್ಕಂತೆ ಪಠ್ಯಕ್ರಮದ ಬದಲಾವಣೆ. ಕೌಶಲಾಧಾರಿತ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯವೃದ್ಧಿ ಸೇರಿದಂತೆ ಹಲವು ಕ್ರಮಗಳ ಅಗತ್ಯವಿದೆ ಎಂದರು.
ಹಾಲಪ್ಪ ಪ್ರತಿಷ್ಠಾನ ಮಧುಗಿರಿ ಬಂಗಾರದ ಪದಕ ವಿಜೇತ ಸ್ನಾತಕ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿಗಳನ್ನು ಮುರಳೀಧರ ಹಾಲಪ್ಪ ಗೌರವಿಸಿದರು.
ಹಿರಿಯ ಪತ್ರಕರ್ತ ಎಸ್. ನಾಗಣ್ಣ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎಂ.ಸಹನಾ, ಸಿಂಡಿಕೇಟ್ ಸದಸ್ಯ ಎಚ್.ಆರ್.ಮನೋಜ್, ಪರೀಕ್ಷಾಂಗ ಕುಲಸಚಿವ ಡಾ. ಎನ್.ಸತೀಶ್ಗೌಡ, ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ದಾಕ್ಷಾಯಿಣಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಬ ಕೆ.ವಿ. ಉಪಸ್ಥಿತರಿದ್ದರು.
ಊಹಾ ಪತ್ರಿಕೋದ್ಯಮಕ್ಕೆ ಜೋತು ಬೀಳಬೇಡಿ
ಪತ್ರಿಕೋದ್ಯಮ ್ಯಾಷನ್ ಆಗಬಾರದು. ಪ್ರಶ್ನೆ ಕೇಳುವುದು ದೊಡ್ಡಸ್ಥಿಕೆ ಅಂದುಕೊಂಡಿದ್ದಾರೆ. ಪತ್ರಕರ್ತರು ಪ್ರಶ್ನೆ ಕೇಳುವುದನ್ನು ಬಿಡಬಾರದು. ಆದರೆ, ಪ್ರಶ್ನೆ ಮಾಡುವ ಮೊದಲು ಆ ವಿಷಯದ ಬಗ್ಗೆ ಅಧ್ಯಯನ ನಡೆಸಿರಬೇಕು. ಒಂದು ವೇಳೆ ಮರು ಪ್ರಶ್ನೆ ಮಾಡಿದರೆ ತಡಕಾಡಬಾರದು. ಊಹಾ ಪತ್ರಿಕೋದ್ಯಮಕ್ಕೆ ಜೋತು ಬಿದ್ದರೆ ಅಧ್ಯಯನಶೀಲತೆ ಬೆಳೆಯುವುದಿಲ್ಲ ಎಂದು ಕೆ.ವಿ.ಪ್ರಭಾಕರ್ ಹೇಳಿದರು.