

ಮದ್ದೂರು: ತಾಲೂಕಿನಲ್ಲಿ ಪಶುವೈದ್ಯಕೀಯ ಸಿಬ್ಬಂದಿ ಕೊರತೆ ಇದ್ದು, ಅದನ್ನು ನೀಗಿಸಲು ಈಗಾಗಲೇ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮವಹಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು
ಪಟ್ಟಣದ ಶಿವಪುರದ ಪಶು ವೈದ್ಯಕೀಯ ಆಸ್ಪತ್ರೆ ಅವರಣದಲ್ಲಿ ಶುಕ್ರವಾರ ಫಲಾನುಭವಿಗಳಿಗೆ ಮೇವು ಕಟಾವು ಯಂತ್ರ ವಿತರಿಸಿ ಮಾತನಾಡಿದರು. ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿರುವವರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಅಗತ್ಯವಿರುವೆಡೆ ಪಶು ಚಿಕಿತ್ಸೆ ಕೇಂದ್ರ ತೆರೆಯಲಾಗುವುದು ಎಂದು ತಿಳಿಸಿದರು.
ಪುರಸಭೆ ವ್ಯಾಪ್ತಿಯ ಹಳೇ ಒಕ್ಕಲಿಗರ ಬಡಾವಣೆಯಲ್ಲಿ ಅಧಿಕ ಜಾನುವಾರುಗಳನ್ನು ಸಾಕಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ಮತ್ತು ಸಂಚಾರ ಪಶು ವೈದ್ಯಕೀಯ ಚಿಕಿತ್ಸಾ ವಾಹನ ನೀಡಲಾಗಿದೆ. ತಾಲೂಕಿನ ಮಲ್ಲನಕುಪ್ಪೆ ಗ್ರಾಮದಲ್ಲಿ ನೂತನ ಪಶು ಚಿಕಿತ್ಸೆ ಕೇಂದ್ರ ತೆರೆಯಲು ಉದ್ದೇಶಿಸಲಾಗಿದ್ದು, ಮಾಸಾಂತ್ಯಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.
ಪುರಸಭೆ ಸದಸ್ಯೆ ಬಿ.ಸಿ.ಸರ್ವಮಂಗಳಾ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ ಉದಯಶಂಕರ್, ಡಾ.ಶ್ರೀನಿವಾಸ್, ಪಶು ಪರಿವೀಕ್ಷಕ ಉಮೇಶ್, ಮುಖಂಡರಾದ ಅರುಣ್ ಕುಮಾರ್, ದಯಾನಂದ, ಸುಪ್ರೀತ್, ನವೀನ್, ಹಾಜರಿದ್ದರು.