ಮಾನಸಿಕ ಅಸ್ವಸ್ತರ ಆರೈಕೆಗಾಗಿ ಜಿಲ್ಲಾ ಮಟ್ಟದಲ್ಲಿ ಆರೈಕೆ ಕೇಂದ್ರಗಳ ಸ್ಥಾಪಿಸಲು ಆದೇಶ

Arogya soudha
Published on

 ಬೆಂಗಳೂರು: ಮಾನಸಿಕ ಆಸ್ವಸ್ತರ ಆರೈಕೆಗಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸರ್ಕಾರೆತರ ಸಂಸ್ಥೆಗಳ ಸಹಯೋಗದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಅರೈಕೆ ಕೇಂದ್ರಗಳನ್ನು ಸ್ಥಾಪಿಸಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಚಿತ್ರದುರ್ಗ, ಯಾದಗಿರಿ, ಕೋಲಾರ ಮತ್ತು ಬೀದರ್ ಜಿಲ್ಲೆಯಲ್ಲಿ ಆಲದಮರ ಫೌಂಡೇಷನ್ ವತಿಯಿಂದ ಹಾಗೂ ಉಳಿದ 27 ಜಿಲ್ಲೆಗಳಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಆರೈಕೆ ಕೇಂದ್ರಗಳನ್ನು ನಿರ್ಮಿಸಬೇಕು. ಈ ಕೇಂದ್ರಗಳ ನಿರ್ಮಾಣಕ್ಕೆ 6 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಮಾನಸಿಕ ಆರೋಗ್ಯ ಸೇವೆ ಪಡೆಯುವ ಸವಾಲುಗಳಿಂದ ಪ್ರತಿ ವರ್ಷ ಸಾವಿರಾರು ಮಾನಸಿಕ ಅಸ್ವಸ್ಥರು ಮನೆಗಳಿಂದ ಹೊರಹೋಗಿ, ನಿರಾಶ್ರಿರಾಗುತ್ತಿದ್ದಾರೆ. ಅವರಿಗೆ ಬೀದಿಗಳು ಅಸುರಕ್ಷಿತ ಸ್ಥಳವಾಗಿದೆ. ಆದ್ದರಿಂದ ನಿರಾಶ್ರಿತರಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಬೇಕು ಎಂದು ಹೇಳಲಾಗಿದೆ.

ಮಾನಸಿಕ ಆರೋಗ್ಯ ಕಾಯ್ದೆ 2017ರ ಪ್ರಕಾರ, ಬೀದಿಗಳಲ್ಲಿ ಗೊತ್ತು ಗುರಿಯಿಲ್ಲದೆ ಅಲೆದಾಡುತ್ತಿರುವ ಜನರನ್ನು ರಕ್ಷಿಸುವುದು ಪೊಲೀಸರ ಕರ್ತವ್ಯ. ಈ ಜನರು ತಮ್ಮ ಮಾನಸಿಕ ಸ್ಥಿತಿಯಿಂದಾಗಿ ಸ್ವಯಂ ಅಥವಾ ಇತರರಿಗೆ ಹಾನಿ ಮಾಡುವ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಸಮುದಾಯದವರಿಗೆ ಮಾನವ ಹಕ್ಕುಸ್ನೇಹಿ ಆರೈಕೆ, ಬೆಂಬಲ, ಮೌಲ್ಯಮಾಪನ, ಚಿಕಿತ್ಸೆಯನ್ನು ಪ್ರಾರಂಭಿಸುವುದು ಅತ್ಯವಶ್ಯಕ ಎಂದು ತಿಳಿಸಲಾಗಿದೆ.

ಮಾನಸಿಕ ಅಸ್ವಸ್ಥ ನಿರಾಶ್ರಿತ ವ್ಯಕ್ತಿಗಳ ಅಗತ್ಯಗಳನ್ನು ಪೂರೈಸಲು ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರ ಅತ್ಯಗತ್ಯ. ಹಾಗಾಗಿ ಅರ್ಹ ಮತ್ತು ಅನುಭವಿ ಸರ್ಕಾರೇತರ ಸಂಸ್ಥೆಗಳನ್ನು ಜಿಲ್ಲಾಧಿಕಾರಿಗಳು ಗುರುತಿಸಿ, ಕೇಂದ್ರ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net