ಸೇತುವೆ ನಿರ್ಮಾಣಕ್ಕೆ ಮೀನಮೇಷ

10-RNR-01
Published on

ರಾಣೆಬೆನ್ನೂರ: ನಗರದಲ್ಲಿ ಹಾದು ಹೋಗಿರುವ ರೈಲ್ವೆ ಹಳಿಯ ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆದಿವೆ. ರೈಲು ಸಂಚಾರವಷ್ಟೇ ಬಾಕಿಯಿದೆ. ಆದರೆ, ನಗರದಲ್ಲಿ ಮೂರು ಪ್ರಮುಖ ರೈಲ್ವೆ ಗೇಟ್​ಗಳಿವೆ. ಅಲ್ಲಿ ಮೇಲ್ಸೇತುವೆಯಾಗಲಿ ಅಥವಾ ಕೆಳಸೇತುವೆ ನಿರ್ವಿುಸುವ ಲಕ್ಷಣ ಗೋಚರಿಸುತ್ತಿಲ್ಲ.

ದೇವರಗುಡ್ಡ ರಸ್ತೆ, ಗಂಗಾಪುರ ಹಾಗೂ ಮೇಡ್ಲೇರಿ ರಸ್ತೆಗೆ ಅಡ್ಡಲಾಗಿ ರೈಲ್ವೆ ಗೇಟ್​ಗಳಿವೆ. ಈ ಮೂರೂ ರಸ್ತೆಯಲ್ಲಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಒಂದು ವೇಳೆ ರೈಲು ಸಂಚಾರ ಆರಂಭಗೊಂಡರೆ, ಗಂಟೆಗೊಂದು ಬಾರಿ ಗೇಟ್ ಬಂದ್ ಮಾಡಬೇಕಾಗುತ್ತದೆ. ಇದರಿಂದ ವಾಹನ ಸವಾರರು ತೀವ್ರ ತೊಂದರೆ ಎದುರಿಸಬೇಕಾಗುತ್ತದೆ.

ದೇವರುಗುಡ್ಡ ಹೊನ್ನಾಳಿ-ಗದಗ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ರೈಲ್ವೆ ಗೇಟ್​ಗೆ ಕೆಳ ಸೇತುವೆ ನಿರ್ವಿುಸಲಾಗಿದೆ. ಈ ರಸ್ತೆಯು ನಾಲ್ಕು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಸಹಜವಾಗಿಯೇ ವಾಹನ ಸಂಚಾರ ದಟ್ಟಣೆ ಇರುತ್ತದೆ. ಜತೆಗೆ ಕೆಳ ಸೇತುವೆಯಿಂದಾಗಿ ಕಬ್ಬು, ಕಂಟೇನರ್ ಸೇರಿ ಬೃಹತ್ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಮಳೆಗಾಲದಲ್ಲಿ ಕೆಳಸೇತುವೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. ಇನ್ನು ಗಂಗಾಪುರ ಹಾಗೂ ಮೇಡ್ಲೇರಿ ರಸ್ತೆಯ ರೈಲ್ವೆ ಗೇಟ್​ಗೆ ಈವರೆಗೂ ಸೇತುವೆ ನಿರ್ವಿುಸಿಲ್ಲ. ಇಲ್ಲಿಯೂ ವಾಹನ ಸವಾರರಿಗೆ ಗೋಳು ತಪ್ಪಿದ್ದಲ್ಲ.

ಭೂ ಸ್ವಾಧೀನ ವಿಳಂಬ: ಮೂರೂ ರೈಲ್ವೆ ಗೇಟ್​ಗೆ ಮೇಲ್ಸೇತುವೆ ನಿರ್ವಿುಸಲು ಅಕ್ಕಪಕ್ಕದ ಜಮೀನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ ಗಂಗಾಪುರ ಗೇಟ್, ಮೇಡ್ಲೇರಿ ಬಳಿ ಮೇಲ್ಸೇತುವೆ ನಿರ್ವಣಕ್ಕೆ ಕೆಲ ಮನೆಗಳನ್ನು ತೆರವುಗೊಳಿಸಬೇಕಾಗುತ್ತದೆ. ಈ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಬೇಕು. ಅದಕ್ಕೆ ಬೇಕಾದ ಅನುದಾನವನ್ನು ರೈಲ್ವೆ ಇಲಾಖೆ ನೀಡುತ್ತದೆ. ಆದರೆ, ಈವರೆಗೂ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿಲ್ಲ. ಆದ್ದರಿಂದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗುವುದು ಕನಸಿನ ಮಾತಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ದೇವರಗುಡ್ಡ ರಸ್ತೆಯ ರೈಲ್ವೆ ಮೇಲ್ಸೇತುವೆ ನಿರ್ಮಾಣ ಸೇರಿ ಮೂರು ಸೇತುವೆ ನಿರ್ವಣಕ್ಕೆ ಆಗ್ರಹಿಸಿ ಈಗಾಗಲೇ ಹಲವಾರು ಬಾರಿ ಹೋರಾಟ ಮಾಡಿದ್ದೇವೆ. ಸಂಸದರು, ಶಾಸಕರು ಈವರೆಗೂ ಆಸಕ್ತಿ ವಹಿಸುತ್ತಿಲ್ಲ. ಹೀಗಾಗಿ, ರೈಲು ತಡೆ ಚಳವಳಿ ನಡೆಸುವ ಕುರಿತು ಸಮಿತಿಯಿಂದ ಸಭೆ ಮಾಡಿದ್ದೇವೆ.| ರವೀಂದ್ರಗೌಡ ಪಾಟೀಲ ರೈಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿ ಅಧ್ಯಕ್ಷ

ಸದ್ಯ ದೇವರಗುಡ್ಡ ರಸ್ತೆ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ವಿುಸಲು ಭೂಮಿ ಬೇಕಾಗಿದೆ. ಈ ಕುರಿತು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಅವರು ಜಾಗ ಒದಗಿಸಬೇಕು. ನಂತರದಲ್ಲಿ ಸೇತುವೆ ಕಾಮಗಾರಿ ಆರಂಭವಾಗಲಿದೆ. ಇನ್ನುಳಿದ ಎರಡು ಸೇತುವೆ ನಿರ್ವಣಕ್ಕೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. | ಷಣ್ಮುಖಪ್ಪ ರೈಲ್ವೆ ಇಲಾಖೆ ಇಂಜಿನಿಯರ್, ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net