

ಚಿಂತಾಮಣಿ: ತಾಲೂಕಿನ ಗಡಿ ಭಾಗದ ಶಾಲೆಗಳಲ್ಲಿ ಕನ್ನಡದ ವಾತಾವರಣ ಮೂಡಿಸಲು ಕನ್ನಡಪರ ಸಂಘಟನೆ ಮತ್ತು ಸಂಸ್ಥೆಗಳು ಭಾಷಾ ಬೆಳವಣಿಗೆಗೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮುಖ್ಯಶಿಕ್ಷಕಿ ಆರ್. ಸರಿತಾ ಹೇಳಿದರು.
ಚಿಂತಾಮಣಿಯ ಸಿರಿಗನ್ನಡ ವೇದಿಕೆ ವತಿಯಿಂದ ತಾಲೂಕಿನ ಮರಬಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಂಭ್ರಮ ಕಾರ್ಯಕ್ರಮ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ಪದ್ಯಗಳು, ಗೀತೆಗಳು ಮತ್ತು ಭಗವದ್ಗೀತೆ ಪಠಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನ ಉತ್ತರ ಭಾಗವು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದೆ. ತೆಲುಗು ಭಾಷೆಯ ಪ್ರಭಾವವು ಅಧಿಕವಾಗಿದೆ. ಬಹುಕೇತ ಮನೆಗಳಲ್ಲಿ ಹೆಚ್ಚಾಗಿ ತೆಲುಗು ಭಾಷೆಯನ್ನೇ ಮಾತನಾಡುತ್ತಾರೆ. ಮಕ್ಕಳಿಗೆ ಕನ್ನಡ ವಾತಾವರಣ ಕಡಿಮೆ. ಹಾಗಾಗಿ ಕನ್ನಡ ಕಲಿಸಲು ಪ್ರಯಾಸ ಪಡಬೇಕಾಗಿದೆ. ಆದ್ದರಿಂದ ಈ ಭಾಗದಲ್ಲಿ ಹೆಚ್ಚು ಕನ್ನಡ ಕಾರ್ಯಕ್ರಮಗಳು ನಡೆಯಬೇಕು ಎಂದರು. ಶಾಲಾ ವಿದ್ಯಾರ್ಥಿಗಳು ಕನ್ನಡ ಪದ್ಯಗಳು ,ಕನ್ನಡ ಗೀತೆಗಳು ಮತ್ತು ಭಗವದ್ಗೀತೆಯ ವಾಚನ ಮಾಡಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಮತ್ತು ಬಹುಮಾನ ನೀಡಲಾಯಿತು.
ಮುಖ್ಯ ಅತಿಥಿಗಳಾದ ತಾಲೂಕು ಕಸಾಪ ಉಪಾಧ್ಯಕ್ಷ ಟಿ.ಸಿ.ಲಕ್ಷ್ಮೀಪತಿ ಮಾತನಾಡಿ, ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷವಾಗಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜನೆ ಮಾಡಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ವಿ. ಶ್ರೀನಿವಾಸನ್ ಕಾರ್ಯಕ್ರಮ ಕುರಿತು ಮಾತನಾಡಿ, ಸಿರಿಗನ್ನಡ ವೇದಿಕೆಯು ತಾಲೂಕು, ಜಿಲ್ಲೆ, ರಾಜ್ಯ, ದೇಶದಲ್ಲಿ ಮತ್ತು ವಿದೇಶದಲ್ಲೂ ಶಾಖೆಗಳನ್ನು ಹೊಂದಿದ್ದು ಕನ್ನಡಮ್ಮನ ಸೇವೆ ಮಾಡುತ್ತಿದೆ ಎಂದು ಹೇಳಲು ಹೆಮ್ಮಯಾಗುತ್ತದೆ. ವಿಶೇಷವಾಗಿ ಶಾಲೆಗಳಲ್ಲಿ ಕವಿ-ಕವನ ವಾಚನ, ಪುಸ್ತಕ ಓದುವುದು, ಕನ್ನಡ ಪದ್ಯಗಳು, ಗೀತೆಗಳ ಗಾಯನ ಮತ್ತಿತರ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೇಮ ಬೆಳೆಸುವ ಕಾರ್ಯಗಳನ್ನು ಆಯೋಜಿಸುತ್ತಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಕಲ್ಪನಾ ಮಾತನಾಡಿದರು. ಸದಸ್ಯ ನರಸಿಂಹಪ್ಪ, ಅಡುಗೆ ಸಿಬ್ಬಂದಿ ಲಕ್ಷ್ಮೀದೇವಿ, ಅಂಗನವಾಡಿ ಕಾರ್ಯಕರ್ತೆ ಈಶ್ವರಮ್ಮ, ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು.