ಅರ್ಥಪೂರ್ಣ ಜನ್ಮದಿನ ಆಚರಣೆ

ಅರ್ಥಪೂರ್ಣ ಜನ್ಮದಿನ ಆಚರಣೆ
Published on

ಹುಣಸೂರು: ತಾಲೂಕಿನ ಯುವನೇತಾರ, ಸಮಾಜ ಸೇವಕ ನಾಡಪ್ಪನಹಳ್ಳಿ ರಾಜು ಶಿವರಾಜೇಗೌಡರ 48ನೇ ವರ್ಷದ ಜನ್ಮದಿನ ಆಚರಣೆ ಅಭಿಮಾನಿಗಳ ಸಂಭ್ರಮದೊಂದಿಗೆ ಸಾಮಾಜಿಕ ಸೇವಾ ಕಾರ್ಯಗಳನ್ನು ಆಯೋಜಿಸುವ ಮೂಲಕ ಸಾರ್ಥಕತೆ ಪಡೆಯಿತು.

ನಗರದ ಕನಕಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ರಾಜು ಶಿವರಾಜೇಗೌಡರಿಗೆ ಅಭಿನಂದಿಸಿ ಮಾತನಾಡಿದ ಮಾಜಿ ಶಾಸಕ ಮಂಜುನಾಥ್, ಕೋವಿಡ್ ಸಂಕಷ್ಟದ ಸಮಯದಲ್ಲಿ ನನ್ನೊಡನೆ ಜತೆಯಾಗಿ ನಿಂತು, ಹಗಲಿರುಳೆನ್ನದೆ ಸಾರ್ವಜನಿಕ ಸೇವೆಗೆ ತೊಡಗಿಸಿಕೊಂಡಿದ್ದರು. ಬಡವರಿಗೆ ಪಡಿತರ, ಆಹಾರ, ಮಾಸ್ಕ್‌ಗಳು, ಆರೋಗ್ಯ ಪರಿಕರಗಳು, ತರಕಾರಿ, ಕಂಬಳಿ, ಮಾತ್ರೆ, ಔಷಧಗಳು ಹೀಗೆ ಅಗತ್ಯವಿದ್ದ ಎಲ್ಲ ಸೇವೆಗಳನ್ನು ನಿಸ್ವಾರ್ಥದಿಂದ ನೀಡಿದರು. ಅವರ ಸಾಮಾಜಿಕ ಕಾಳಜಿ ಅನನ್ಯ. ಅವರ ಸೇವೆ ತಾಲೂಕಿನ ಜನರಿಗೆ ಇನ್ನಷ್ಟು ಲಭ್ಯವಾಗಲಿ ಎಂದು ಆಶಿಸಿದರು.

ಅಭಿಮಾನಿ ಬಳಗದ ಮತ್ತು ಹಿರಿಯರ ಅಭಿನಂದನೆ ಸ್ವೀಕರಿಸಿ ಕುಟುಂಬದವರೊಂದಿಗೆ ಕೇಕ್ ಕತ್ತರಿಸಿ ಮಾತನಾಡಿದ ರಾಜು ಶಿವರಾಜೇಗೌಡ, ನನ್ನ ಸ್ನೇಹಬಳಗದ ಸದಸ್ಯರು ಹುಟ್ಟುಹಬ್ಬ ಆಚರಿಸಲು ಮುಂದಾದಾಗ, ನನಗೆ ಹಲವಾರು ಕಂಪನಿಗಳ ಮುಖ್ಯಸ್ಥರು ಉದ್ಯೋಗಮೇಳ ಆಯೋಜಿಸುವ ಮೂಲಕ ಕಂಪನಿಗಳಿಗೆ ಯುವಕರನ್ನು ಕೊಡಿರೆಂದು ಕೋರಿದ್ದರು. ಅದರಂತೆ ಉದ್ಯೋಗ ಮೇಳ ನಡಸುವಂತೆ ಕೋರಿದೆ. ಅದರೊಂದಿಗೆ ಸ್ನೇಹಬಳಗದ ಸದಸ್ಯರು ಆರೋಗ್ಯ, ರಕ್ತದಾನದಂತಹ ಶಿಬಿರಗಳನ್ನು ಆಯೋಜಿಸಿ ನನ್ನ ಹುಟ್ಟಹಬ್ವನ್ನು ಸಾರ್ಥಕಗೊಳಿಸಿದ್ದಾರೆ. ನನ್ನೂರಿನ ಜನರಿಗಾಗಿ ನಾನು ಎಂದೆಂದಿಗೂ ಸೇವೆ ನೀಡಲು ಸಿದ್ಧನಿದ್ದೇನೆ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಅಮರನಾಥ್, ರಾಜು ಶಿವರಾಜೇಗೌಡರ ಸ್ನೇಹಬಳಗದ ಪ್ರಶಾಂತ್ ಮೇತಲ್, ನಂಜುಂಡಸ್ವಾಮಿ, ಕೃಷ್ಣ ಸೇರಿದಂತೆ ಮುಖಂಡರು ಮತ್ತು ಅಬಿಮಾನಿಗಳು ಹಾಜರಿದ್ದರು.

ಸಾಮಾಜಿಕ ಚಟುವಟಿಕೆ: ಉದ್ಯೋಗಾಕಾಂಕ್ಷಿಗಳಾಗಿ ಬಂದ ಯುವಕ ಯುವತಿಯರ ಪೈಕಿ 70ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳಿಂದ ಆಫರ್ ಲೆಟರ್ ಪಡೆದ ಖುಷಿ.. 450ಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆಗೊಳಗಾದರು. 34ಜನ ರಕ್ತದಾನ ಮಾಡಿದರು.

ನಗರದ ಕನಕಭವನದಲ್ಲಿ ಶನಿವಾರ ಆಯೋಜಿಸಿದ್ದ ಉದ್ಯೋಗಮೇಳ, ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳು ಯಶಸು ಸಾಧಿಸಿದವು. ಸ್ನೇಹಬಳಗದ ಮುಖಂಡ ಮತ್ತು ಹೈಕೋರ್ಟ್ ವಕೀಲ ಪ್ರಶಾಂತ್ ಮೇತಲ್ ಮತ್ತು ಹಿರಿಯ ಉದ್ಯಮಿ ನಂಜುಂಡಸ್ವಾಮಿ ನೇತೃತ್ವದ ತಂಡ ಸೇವೆ ಪಡಯಲು ಬಂದವರನ್ನು ಸತ್ಕರಿಸಿದರು.

ಉದ್ಯೋಗಕ್ಕಾಗಿ 415 ಅಭ್ಯರ್ಥಿಗಳು: ಇನ್‌ಫೋಸಿಸ್, ಕೆವಿಸಿ, ಮಾಂಡೋವಿ ಮೋಟಾರ್ಸ್‌, ರಂಗಸನ್ಸ್ ಸೇರಿದಂತೆ 30ಕ್ಕೂ ಹೆಚ್ಚು ಕಂಪನಿಗಳು ಯುವಕರಿಗೆ ಉದ್ಯೋಗ ನೀಡಲು ಮುಂದೆ ಬಂದಿದ್ದರು. ಉದ್ಯೋಗಕ್ಕಾಗಿ 415 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ ಬಹುತೇಕರು ಅಂತಿಮವರ್ಷದ ಪದವಿ ವಿದ್ಯಾರ್ಥಿಗಳಾಗಿ ಇನ್ನೆರಡು ತಿಂಗಳಲ್ಲಿ ಪರೀಕ್ಷೆ ಮುಗಿಸಿ ಬರಬೇಕಿದ್ದ ಕಾರಣ 70ಕ್ಕೂ ಹೆಚ್ಚು ಅಭ್ಯರ್ಥಿಗಳು ಲೆಟರ್ ಪಡೆದುಕೊಂಡರು.

450ಕ್ಕೂ ಹೆಚ್ಚು ಜನರಿಗೆ ಕಣ್ಣಿನ ತಪಾಸಣೆ

ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಒಟ್ಟು 450ಕ್ಕೂ ಹಚ್ಚು ಜನ ತಪಾಸಣೆಗೊಳಗಾದರು. ಈ ಪೈಕಿ 228 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಶಸ್ತ್ರಚಿಕಿತ್ಸೆ ಅವಶ್ಯವಿರುವ 39 ಜನರನ್ನು ಶಸ್ತ್ರ ಚಿಕಿತ್ಸೆಗೆ ಕರೆದೊಯ್ಯಲಾಯಿತು. 270 ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಹುಟ್ಟುಹಬ್ಬದ ಅಂಗವಾಗಿ ಜೀವಧಾರ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 34 ಜನರು ರಕ್ತದಾನ ಮಾಡಿದರು.

ಇದೇ ವೇಳೆ 2023ನೇ ಸಾಲಿನ ರಾಜ್ಯ ಸರ್ಕಾರ ಕೊಡಮಾಡುವ ಡಾ.ಬಿ.ಅರ್.ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾದ ತಾಲೂಕಿನ ಹಿರಿಯ ದಲಿತ ಹೋರಾಟಗಾರ ಹರಿಹರ ಆನಂದಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಶಿಬಿರಕ್ಕೆ ಬಂದ ಶಿಬಿರಾರ್ಥಿಗಳು ಮತ್ತು ಅಭಿಮಾನಿಗಳಿಗೆ ಸಸ್ಯಹಾರಿ, ಮಾಂಸಹಾರಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net