ಮಿಮ್ಸ್​ಗೆ 15 ಲಕ್ಷ ರೂ. ಮೌಲ್ಯದ ವೈದ್ಯಕೀಯ ಪರಿಕರ ಹಸ್ತಾಂತರಿಸಿದ ಎಂಡಿಸಿಡಿಒ

mims
Published on

ಮಂಡ್ಯ: ಮಂಡ್ಯ ಜಿಲ್ಲಾ ಔಷಧ ವ್ಯಾಪಾರಿಗಳು ಹಾಗೂ ವಿತರಕರ ಸಂಘ(ಎಂಡಿಸಿಡಿಒ)ವು ನ್ಯೂಯಾರ್ಕ್ ಕನ್ನಡ ಕೂಟದ ಸಹಯೋಗದಲ್ಲಿ ಶನಿವಾರ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಪಿಡಿಯಾಟ್ರಿಕ್ ವೆಂಟಿಲೇಟರ್ ಸೇರಿದಂತೆ ಸುಮಾರು 15 ಲಕ್ಷ ರೂ ಮೌಲ್ಯದ ವೈದ್ಯಕೀಯ ಪರಿಕರಗಳನ್ನು ಹಸ್ತಾಂತರ ಮಾಡಿದೆ.

ಈ ಸಂದರ್ಭದಲ್ಲಿ ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, "ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನ್ಯೂಯಾರ್ಕ್ ಕನ್ನಡ ಕೂಟ, ಜಿಲ್ಲಾ ಔಷಧ ವ್ಯಾಪಾರಿಗಳು ಹಾಗೂ ವಿತರಕರ ಸಂಘದ ವತಿಯಿಂದ ನೀಡಿರುವ ವೈದ್ಯಕೀಯ ಪರಿಕರದಿಂದ ಹೆಚ್ಚಿನ ಅನುಕೂಲವಾಗಲಿದೆ. ಯಾವುದೇ ದೇಶದಲ್ಲಿದ್ದರೂ ನಮ್ಮ ತಾಯಿನಾಡನ್ನು ಮರೆಯಬಾರದು. ತಮ್ಮಿಂದಾಗುವ ಸೇವೆ ಸಲ್ಲಿಸುತ್ತಿರಬೇಕು. ಈ ನಿಟ್ಟಿನಲ್ಲಿ ಒಕ್ಕೂಟದ ಅಧ್ಯಕ್ಷ ಅಜಿತ್ ಭಾಸ್ಕರ್ ಹಾಗೂ ಸಂಸ್ಥೆಯ ಪದಾಧಿಕಾರಿಗಳ ಸೇವೆ ಶ್ಲಾಘನೀಯ" ಎಂದು ಹೇಳಿದರು.

ಎಂಡಿಸಿಡಿಒ ಜಿಲ್ಲಾಧ್ಯಕ್ಷ ಬಿ.ಲೋಕೇಶ್ ಮಾತನಾಡಿ, ಈಗಾಗಲೇ ನಮ್ಮ ಸಂಘದಿಂದ ಹಲವು ಸಮಾಜಮುಖಿ ಸೇವೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಈ ನಿಟ್ಟಿನಲ್ಲಿ ನ್ಯೂಯಾರ್ಕ್ ಕನ್ನಡ ಕೂಟದ ಸಹಯೋಗದಲ್ಲಿ ಲಕ್ಷಾಂತರ ರೂ ಮೌಲ್ಯದ ವೈದ್ಯಕೀಯ ಪರಿಕರಗಳನ್ನು ರೋಗಿಗಳಿಗೆ ಅನುಕೂಲ ಮಾಡಲು ನೀಡಲಾಗಿದೆ. ಒಕ್ಕೂಟದಿಂದ ಇನ್ನಷ್ಟು ಸೌಲಭ್ಯ ಕೊಡಿಸಲು ಯೋಜನೆ ರೂಪಿಸಿದ್ದೇವೆ ಎಂದರು.

ಮಿಮ್ಸ್ ನಿರ್ದೇಶಕ ಡಾ.ಎಂ.ಆರ್.ಹರೀಶ್, ಔಷಧ ಪರಿವೀಕ್ಷಕಿ ವಿಶಾಲಾಕ್ಷಿ, ಸಂಘದ ಉಪಾಧ್ಯಕ್ಷ ಬಿ.ರಾಜಣ್ಣ, ಕಾರ್ಯದರ್ಶಿ ರಾಜಶೇಖರ್, ಸಲಹೆಗಾರ ಕೆ.ಪ್ರಭಾಕರ್, ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಸಹ ಕಾರ್ಯದರ್ಶಿ ಮಹೇಶ್, ಖಜಾಂಚಿ ಮುನಿಸಿದ್ದೇಗೌಡ, ಒಕ್ಕೂಟದ ಪ್ರತಿನಿಧಿ ಪವನ್ ಶೆಟ್ಟಿ, ಮಿಮ್ಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net