

ಔರಾದ್: ಧೂಪತಮಹಾಗಾಂವ ಗ್ರಾಮ ಪಂಚಾಯಿತಿಗೆ ಎಂಬಿಎ ಪದವೀಧರ ಶ್ರೀನಿವಾಸ ಗಣಪತರಾವ ಜೊನ್ನೆಕೇರಿ (37) ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀನಿವಾಸ, ಉಪಾಧ್ಯಕ್ಷರಾಗಿ ವಿದಾವತಿ ಆಯ್ಕೆಯಾಗಿದ್ದು, ಎರಡೂ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಅವಿರೋಧ ಆಯ್ಕೆ ಪ್ರಕಟಿಸಿದರು.
ಧೂಪತಮಹಾಗಾಂವದ ಶ್ರೀನಿವಾಸ ಧಾರವಾಡದಲ್ಲಿ ಬಿಎಸ್ಸಿ, ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದು ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದರು. ಕೈತುಂಬ ಸಂಬಳ ಬಿಟ್ಟು ಸ್ವಗ್ರಾಮದ ಅಭಿವೃದ್ಧಿ ಕನಸು ಹೊತ್ತು ಎರಡು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಕಣಕ್ಕಿಳಿದು ಭರ್ಜರಿ ಜಯ ಗಳಿಸಿದ್ದರು. ಇದೀಗ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಸ್ವಗ್ರಾಮಕ್ಕಾಗಿ ಏನಾದರೂ ಕೆಲಸ ಮಾಡಬೇಕು, ಕೈಲಾದಷ್ಟು ಜನಸೇವೆ ಮಾಡುವ ಕನಸು ನನಸಾಗಿದೆ. ಬರುವ ದಿನಗಳಲ್ಲಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವೆ ಎನ್ನುತ್ತಾರೆ ಶ್ರೀನಿವಾಸ.